ಕನ್ನಡಪ್ರಭ ವಾರ್ತೆ ಉಡುಪಿ
162 ವರ್ಷಗಳ ಇತಿಹಾಸ ಇರುವ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಜಗತ್ತಿನ ಅಪೂರ್ವ ನಿಧಿಯಾಗಿದೆ. ಜಗತ್ತಿನ ಶಾಂತಿ ಕಾಪಾಡುವಲ್ಲಿ ರೆಡ್‌ಕ್ರಾಸ್ ಕೊಡುಗೆ ಸದಾ ಸ್ಮರಣೀಯ. ದೀನ ದಲಿತರ ಮಾನವೀಯ ಸೇವೆ ರೆಡ್‌ಕ್ರಾಸ್‌ನ ಉದ್ದೇಶವಾಗಿದೆ. ಇದರಿಂದಲೇ 4 ಬಾರಿ ರೆಡ್‌ಕ್ರಾಸ್ ಸಂಸ್ಥೆಗೆ ಶಾಂತಿ ನೊಬೆಲ್ ಪ್ರಶಸ್ತಿ ಲಭಿಸಿದೆ. ರೆಡ್‌ಕ್ರಾಸ್ ಸ್ಥಾಪಕ ಹೆನ್ರಿ ಡ್ಯುನಾಂಟ್ ಸದಾ ಸ್ಮರಣೀಯರು ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಹೇಳಿದರು.ಅವರ ಶನಿವಾರ ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಉದ್ಘಾಟಿಸಿ ವಿವಿಧ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ ರಾಜ್ಯ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಕರ್ನಾಟಕ ರಾಜ್ಯ ರೆಡ್‌ಕ್ರಾಸ್‌ನ ಕೊಡುಗೆಗಳನ್ನು ವಿವರಿಸಿದರು. ಬೆಂಗಳೂರು ನಗರ ರೆಡ್‌ಕ್ರಾಸ್ ಸಭಾಪತಿ ಬಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ನಿತ್ಯಾನಂದ ಒಳಕಾಡು, ನಿರುಪಮಾ ಪ್ರಸಾದ್ ಮತ್ತು ಭಾರತಿ ಅವರನ್ನು ಸನ್ಮಾನಿಸಲಾಯಿತು. ೧೫ ಫಲಾನುಭವಿಗಳಿಗೆ ಗಾಲಿಕುರ್ಚಿ, ೧೦ ಫಲಾನುಭವಿಗಳಿಗೆ ಶ್ರವಣಸಾಧನ, ೧೦ ಫಲಾನುಭವಿಗಳಿಗೆ ಗೃಹಪಯೋಗಿ ವಸ್ತುಗಳನ್ನು ಹಾಗೂ ವಿವಿಧ ಶಾಲಾ ಕಾಲೇಜುಗಳಿಗೆ ಪ್ರಥಮ ಚಿಕಿತ್ಸಾ ಕಿಟ್ಟನ್ನು ವಿತರಿಸಲಾಯಿತು.ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಸಂಯೋಜಕಿ ಡಾ. ದಿವ್ಯ ಎಂ.ಎಸ್., ಭಾರತೀಯ ರೆಡ್‌ಕ್ರಾಸಿನ ಕೊಡುಗೆ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ರೆಡ್‌ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ., ನಿಕಟ ಪೂರ್ವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್ ಉಪಸ್ಥಿತರಿದ್ದರು. ಖಜಾಂಚಿ ರಮಾದೇವಿ ವಂದಿಸಿದರು. ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.