ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮಂಗಳೂರು ಘಟಕದ ಬ್ಲಡ್‌ಬ್ಯಾಂಕ್ ವಿಶ್ವದ ಅಪರೂಪದ ಬಾಂಬೆ ಗುಂಪಿನ ರಕ್ತದ ಅಗತ್ಯವನ್ನು ಪೂರೈಸಿ ರೋಗಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಇದರಿಂದ ನೆರವಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮಂಗಳೂರು ಘಟಕದ ಬ್ಲಡ್‌ಬ್ಯಾಂಕ್ ವಿಶ್ವದ ಅಪರೂಪದ ಬಾಂಬೆ ಗುಂಪಿನ ರಕ್ತದ ಅಗತ್ಯವನ್ನು ಪೂರೈಸಿ ರೋಗಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರಿಗೆ ತುರ್ತಾಗಿ ಎರಡು ಯೂನಿಟ್ ಬಾಂಬೆ ಗುಂಪಿನ ರಕ್ತದ ಅಗತ್ಯವಿತ್ತು. ಈ ರಕ್ತ ಗುಂಪು ಅತ್ಯಂತ ವಿರಳವಾಗಿದ್ದು, ಸ್ಥಳೀಯ ರಕ್ತನಿಧಿಗಳಲ್ಲಿ ಲಭ್ಯವಾಗದ ಕಾರಣ ಪರಿಸ್ಥಿತಿ ಗಂಭೀರವಾಗಿತ್ತು.ರೆಡ್‌ಕ್ರಾಸ್ ಮಂಗಳೂರು ಘಟಕದ ಬ್ಲಡ್‌ಬ್ಯಾಂಕ್‌ನ ಸಿಬ್ಬಂದಿ ತಕ್ಷಣ ರಾಜ್ಯದ ವಿವಿಧ ಭಾಗಗಳು ಹಾಗೂ ಪಕ್ಕದ ರಾಜ್ಯಗಳ ರಕ್ತದಾನಿಗಳನ್ನು ಸಂಪರ್ಕಿಸಿದರು. ಸತತ ಪ್ರಯತ್ನದ ಫಲವಾಗಿ ಉಡುಪಿಯ ವಿದ್ಯಾ ನಗರ ನಿವಾಸಿ ಸುಧೀರ್ ಹಾಗೂ ಕೇರಳದ ಕ್ರಿಸ್ಟಿಸ್ಯಾಮ್ ಜೋನ್ ಎಂಬ ಇಬ್ಬರು ದಾನಿಗಳನ್ನು ಸಂಪರ್ಕಿಸಲಾಯಿತು. ಇಬ್ಬರು ದಾನಿಗಳು ಮಂಗಳೂರಿಗೆ ಆಗಮಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಸಕಾಲದಲ್ಲಿ ಅಗತ್ಯ ರಕ್ತ ಪೂರೈಸಿದ ಕಾರಣ ಜೀವ ರಕ್ಷಣೆ ಸಾಧ್ಯವಾಯಿತು.ರಕ್ತದಾನಿಗಳ ಸೇವೆಯನ್ನು ಹಾಗೂ ಬ್ಲಡ್‌ಬ್ಯಾಂಕ್ ಸಿಬ್ಬಂದಿಯ ನೆರವನ್ನು ಆಸ್ಪತ್ರೆಯ ವೈದ್ಯರು ಹಾಗೂ ರೋಗಿಯ ಕುಟುಂಬದವರು ಪ್ರಶಂಸಿದರು. ರಕ್ತದಾನ ಜೀವದಾನವಾಗಿದ್ದು, ಇದು ಪ್ರತಿಯೊಬ್ಬ ನಾಗರಿಕನ ಮಾನವೀಯ ಕರ್ತವ್ಯವಾಗಿದೆ. ಅಪರೂಪದ ರಕ್ತ ಗುಂಪು ಇರುವವರು ಅತ್ಯಂತ ಅಗತ್ಯವಾಗುವ ಸಂದರ್ಭಗಳಲ್ಲಿ, ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆ ವಿನಂತಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.