ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
1982 ರಿಂದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ವೃತ್ತಿ ಆರಂಭಿಸಿದ್ದ ರೆಡ್ಡಪ್ಪ, 2023 ರ ಜೂನ್ ವರೆಗೂ ಶಿಕ್ಷಕನಾಗಿ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಆವಲ ಗುರ್ಕಿಯ ಪ್ರೌಢಶಾಲೆಯಲ್ಲಿ ನಿವೃತ್ತಿಯಾಗಿದ್ದಾರೆ. ವೃತ್ತಿ ಜೀವನದ ಆರಂಭದಿಂದಲೂ ವಿವಿಧ ಭಿನ್ನ ವಿಭಿನ್ನ ಹಳೆಯ ಮಾದರಿಯ ವಸ್ತುಗಳನ್ನು ಸಂಗ್ರಹಿಸಿ, ಪುಸ್ತಕಗಳನ್ನು ಓದುವ ಪ್ರವೃತ್ತಿ ಬೆಳಸಿಕೊಂಡಿದ್ದ ಅವರು ನೂರಾರು ಪುಸ್ತಕಗಳನ್ನು ಸಂಗ್ರಹಿಸಿದ್ದರು. ನಿವೃತ್ತಿ ಹೊಂದಿದ ಬಳಿಕ ಈಗ ತನ್ನ ಮನೆಯನ್ನೇ ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯ ಮಾಡಿ ಓದಲು ಆಸಕ್ತಿ ಇರುವ ಜನರಿಗೆ ನೆರವಾಗುತ್ತಿದ್ದಾರೆ.
2002ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1991 ರಲ್ಲಿ ಭಾರತ ಜನಗಣತಿಯಲ್ಲಿ ಉತ್ತಮ ಗಣತಿದಾರ ಪ್ರಶಸ್ತಿ ಹಾಗೂ 2002 ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು ಇಡೀ ಜಿಲ್ಲೆಯ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿ ಹೊರ ಹೊಮ್ಮಿದ್ದಾರೆ. ನಿವೃತ್ತಿಯ ಬಳಿಕ ಬಂದ ಹಣವನ್ನು ಒಡವೆ, ಆಸ್ತಿಪಾಸ್ತಿ ಎಂದು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದೇ ಅದೇ ಹಣದಿಂದ ಮನೆಯ ಮಹಡಿಯ ಮೇಲೆ ಗ್ರಂಥಾಲಯ ನಿರ್ಮಿಸಿ, ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಜ್ಞಾನ ದೇಗುಲ ನಿರ್ಮಿಸಿ ಅದರ ಉದ್ಘಾಟನೆಯನ್ನು ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ರಿಂದ ಲೋಕಾರ್ಪಣೆ ಮಾಡಿಸಿದ್ದಾರೆ.