ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಇಂದರಗಿ ಗ್ರಾಮದಲ್ಲಿ ಬಾಲಕನೊಬ್ಬನ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ಮಗು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.ರಾಜು ಇಂದ್ರಪ್ಪ (4) ಎಂಬ ಮಗು ಹೊಲದಲ್ಲಿ ಆಟವಾಡುತ್ತಿದ್ದ ವೇಳೆ ಕರಡಿಯೊಂದು ಹಠಾತ್ ದಾಳಿ ಮಾಡಿ ಹೊಟ್ಟೆ ಹಾಗೂ ತೊಡೆಯ ಭಾಗದಲ್ಲಿ ಕಚ್ಚಿ ತೀವ್ರ ಗಾಯಗೊಳಿಸಿದೆ.
ಮಗುವಿನ ತಂದೆ ಇಂದ್ರಪ್ಪ ಹಾಗೂ ದಂಪತಿ ಗ್ರಾಮದ ಹೊರವಲಯದ ಬೆಟ್ಟದ ಆಚೆಗಿನ ಹೊಲದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಕೆಲಸದಲ್ಲಿ ಮಗ್ನರಾಗಿದ್ದರು.ಮಗು ಬದುವಿನ ಬಳಿ ಆಟವಾಡುತ್ತ ಕುಳಿತಿದ್ದ ಸಮಯದಲ್ಲಿ ಕರಡಿಯು ಮಗುವಿನ ಮೇಲೆ ದಾಳಿ ಮಾಡಿದೆ.
ಮಗುವಿನ ತಾಯಿ ರಕ್ಷಣೆಗಾಗಿ ಅರಚುತ್ತಾ ಬಂದ ಕೂಡಲೇ ಕರಡಿಯು ಮಗುವನ್ನು ಕಚ್ಚಿ ಓಡಿದೆ. ತಕ್ಷಣ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ರೈತರ ಆತ್ಮಹತ್ಯೆ ತಡೆಗಟ್ಟಲು ಕ್ರಮ:
ಸರ್ಕಾರವು ರೈತರ ಆತ್ಮಹತ್ಯೆ ತಡೆಗಟ್ಟಲು ಸಾಕಷ್ಟು ಕ್ರಮ ವಹಿಸಿದೆ. ಆದಾಗ್ಯೂ ಜಿಲ್ಲೆಯಲ್ಲಿ ಕಳೆದ 5 ವರ್ಷಗಳ ಲೆಕ್ಕಾಚಾರದಲ್ಲಿ ಪ್ರತಿ ವರ್ಷ ಸರಾಸರಿ 23ರಿಂದ 25 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 2023-24ನೇ ಸಾಲಿನಲ್ಲಿ 28 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ₹5 ಲಕ್ಷ ಪರಿಹಾರಧನ ಜೊತೆಗೆ ಇತರೆ ವಿಶೇಷ ಸೌಲಭ್ಯಗಳಾದ ವಿಧವಾ ವೇತನ, ರೈತರ ಮಕ್ಕಳಿಗೆ ಸ್ನಾತಕೋತ್ತರ ಪದವಿಯವರೆಗೆ ಉಚಿತ ವಸತಿ ಮತ್ತು ಶಿಕ್ಷಣ ಸೌಲಭ್ಯ ಸೇರಿದಂತೆ ಜಿಲ್ಲೆಯ ರೈತರಿಗೆ ಸರ್ಕಾರದ ನಿಗದಿತ ಸೌಲಭ್ಯ ನೀಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೃಷಿ ವಿಜ್ಞಾನ ಕೇಂದ್ರ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳ ಮೂಲಕ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳೆ ಪರಿಹಾರವಾಗಿ 1,02,219 ಜನ ರೈತರಿಗೆ ₹122.00 ಕೋಟಿ ಪರಿಹಾರಧನವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. 2023-24ನೇ ಸಾಲಿನಲ್ಲಿ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಒಟ್ಟು 75,519 ಫಲಾನುಭವಿಗಳಿಗೆ ₹84.14 ಕೋಟಿ ಬೆಳೆವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. 2023-24ನೇ ಸಾಲಿನಲ್ಲಿ 2,22,971 ರೈತರಿಗೆ ₹2581.90 ಕೋಟಿ ಬೆಳೆ ಸಾಲವನ್ನು ರಾಷ್ಟ್ರೀಯ ಮತ್ತು ಸಹಕಾರಿ ಬ್ಯಾಂಕ್‌ಗಳ ಮೂಲಕ ನೀಡಲಾಗಿದೆ ಮತ್ತು ಅದೇ ರೈತರಿಗೆ ಮರು ಸಾಲ ನೀಡಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ.
ಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಜೀವನೋಪಾಯ ಪರಿಹಾರವಾಗಿ ಜಿಲ್ಲೆಯಿಂದ 51,645 ಜನ ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿಗೆ ₹14.80 ಕೋಟಿ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಆಗಾಗ್ಗೆ ರೈತರೊಂದಿಗೆ ಮತ್ತು ಬ್ಯಾಂಕ್‌ಗಳೊಂದಿಗೆ ಸಭೆ ಮಾಡಿ ರೈತರಿಗೆ ಯಾವುದೇ ನೋಟಿಸ್ ನೀಡದಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಕಳೆದ ಸಾಲಿನಿಂದ ಸರ್ಕಾರದಿಂದ ಘೋಷಣೆಯಾದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲಪುವಂತೆ ಕ್ರಮ ವಹಿಸಲಾಗಿದೆ.ಗ್ರಾಪಂ ಮಟ್ಟದಲ್ಲಿ ಕೃಷಿ ಸಖಿ ಮತ್ತು ಪಶು ಸಖಿಗಳ ಸಹಕಾರದೊಂದಿಗೆ ರೈತರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಯಡಿ 3,08,510 ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.