ಧಾರವಾಡ: ಓಬಳಾಪುರಂ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕಣದಲ್ಲಿ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ನಾಲ್ವರಿಗೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದನ್ನು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಹಾಗೂ ಹೋರಾಟಗಾರ ಎಸ್.ಆರ್. ಹಿರೇಮಠ ಸ್ವಾಗತಿಸಿದ್ದು, ಐತಿಹಾಸಿಕ ಮೈಲುಗಲ್ಲು ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಪ್ರಕರಣ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿರುವ ಅವರು, ಕರ್ನಾಟಕದ ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಅನಂತಪುರದಲ್ಲಿ ಓಬಳಾಪುರಂ ಕಂಪನಿ ಮೂಲಕ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ನಡೆಸಿದ್ದರು. ಈ ಕುರಿತಾಗಿ ತಾವು 16 ವರ್ಷಗಳ ಕಾಲ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್‌ನಲ್ಲಿ ಸುದೀರ್ಘ ಹೋರಾಟ ನಡೆಸಿದ್ದು, ಇದರ ಪರಿಣಾಮ ಜನಾರ್ದನ ರೆಡ್ಡಿ ಅವರನ್ನು ಜೈಲಿಗೂ ಅಟ್ಟಲಾಗಿತ್ತು. ಮೂರುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಅವರು, ಹಣದ ಪ್ರಭಾವದಿಂದ ಜಾಮೀನು ಪಡೆದಿದ್ದರು. ಇದರ ಪರಿಣಾಮವಾಗಿ ಓರ್ವ ನ್ಯಾಯಾಧೀಶರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೊಬ್ಬರು ಜೈಲಿಗೆ ಹೋಗಿರುವ ಸಂಗತಿಯೂ ಗೊತ್ತಿರುವ ಮಾತು. ಇಂತಹ ಪ್ರಭಾವದ ವ್ಯಕ್ತಿಯ ವಿರುದ್ಧ ಹೈದರಾಬಾದ್ ಸಿಬಿಐನ ವಿಶೇಷ ನ್ಯಾಯಾಲಯವು ನಿಷ್ಪಕ್ಷಪಾತವಾಗಿ ಶಿಕ್ಷೆಯನ್ನು ಪ್ರಕಟಿಸಿದೆ. ಜತೆಗೆ ಅಕ್ರಮ ಗಣಿಗಾರಿಕೆಯ ಹಿನ್ನೆಲೆಯಲ್ಲಿ ಓಬಳಾಪುರಂ ಕಂಪನಿಗೆ ದಂಡವನ್ನು ಸಹ ವಿಧಿಸಿದೆ ಎಂದರು.ಶಾಸಕತ್ವ ರದ್ದಾಗಲಿ: ಸಂವಿಧಾನದ ಮಹತ್ವದ ಕಾಯ್ದೆ ಪ್ರಕಾರ ಜನಪ್ರತಿನಿಧಿಗಳಿಗೆ 2 ವರ್ಷಕ್ಕಿಂತ ಹೆಚ್ಚಿನ ಅವಧಿ ಶಿಕ್ಷೆ ಪ್ರಕಟವಾದಾಗ ಅವರ ಶಾಸಕತ್ವ ರದ್ದಾಗಲಿದೆ. ಈ ಕಾರ್ಯ ನಡೆಯಲಿದ್ದು, ಜತೆಗೆ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಇನ್ನೂ ಭಯಂಕರ ಪ್ರಕಣಗಳಿದ್ದು, ಅವುಗಳಲ್ಲೂ ಕೂಡಾ ನ್ಯಾಯಾಲಯ ಮುಂದುವರೆಸಿ ದೇಶದ ಸಂವಿಧಾನದ ಪ್ರಕಾರ ಶಿಕ್ಷೆಯಾಗಬೇಕು. ನನ್ನ ಪ್ರಕಾರ ರೆಡ್ಡಿ ಮೇಲೆ ಇನ್ನೂ ಹತ್ತಾರು ಗಣಿ ಅಕ್ರಮಗಳಿದ್ದು, ಶೀಘ್ರ ಹಾಗೂ ಸರಿಯಾದ ನ್ಯಾಯಾದಾನ ಉಂಟಾದರೆ ಉಳಿದ ಜೀವಮಾನ ಪೂರ್ತಿ ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂದು ಹಿರೇಮಠ ಹೇಳಿದರು.