ಕೊಡಗು ಜಿಲ್ಲೆಯಲ್ಲಿ ತಗ್ಗಿದ ಮಳೆ ಆರ್ಭಟ: ಪ್ರವಾಹ ಯಥಾಸ್ಥಿತಿ

KannadaprabhaNewsNetwork |  
Published : Jul 20, 2024, 12:45 AM IST
ಚಿತ್ರ : 19ಎಂಡಿಕೆ2 : ಮಡಿಕೇರಿ-ಚೆಟ್ಟಳ್ಳಿ ರಸ್ತೆ ಅಬ್ಯಾಲ ಬಳಿ ಕುಸಿದ ಬರೆ.  | Kannada Prabha

ಸಾರಾಂಶ

ಜಿಲ್ಲೆಯಾದ್ಯಂತ ಶುಕ್ರವಾರ ಮಳೆಯಬ್ಬರ ಕೊಂಚ ಕಡಿಮೆಯಾಗಿದೆ. ಆದರೂ ಕೆಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಅಲ್ಲದೆ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಶನಿವಾರ ಕೂಡ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಾದ್ಯಂತ ಶುಕ್ರವಾರ ಮಳೆಯಬ್ಬರ ಕೊಂಚ ಕಡಿಮೆಯಾಗಿದೆ. ಆದರೂ ಕೆಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಅಲ್ಲದೆ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಶನಿವಾರ ಕೂಡ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಪ್ರವಾಹ ಪರಿಸ್ಥಿತಿ ಕೂಡ ಕಡಿಮೆಯಾಗಿದೆ. ಕರಡಿಗೋಡಿನಲ್ಲಿ ಹಾಕತ್ತೂರು-ಮೂರ್ನಾಡು ಸಂಪರ್ಕ ಕಲ್ಪಿಸುವ ಮುತ್ತಾರ್ ಮುಡಿ ಸೇತುವೆ ಬಳಿ ಜಲಾವೃತಗೊಂಡಿತು. ನಾಪೋಕ್ಲು ಸಮೀಪದ ಕೊಟ್ಟಮುಡಿ ಜಂಕ್ಷನ್ ನಿಂದ ಮೂರ್ನಾಡು ತೆರಳುವ ರಸ್ತೆಯಲ್ಲಿ ಪ್ರವಾಹ ಹಾಗೇ ಇದ್ದು, ಸಂಚಾರ ಸ್ಥಗಿತಗೊಂಡಿದೆ. ಕುಶಾಲನಗರದ ಸಾಯಿ ಬಡಾವಣೆಯಲ್ಲಿ ಪ್ರವಾಹ ಮುಂದುವರಿದಿದೆ.

ಮಳೆಯಿಂದಾಗಿ ಹಾರಂಗಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ಸುಮಾರು 23,760 ಕ್ಯೂಸೆಕ್ ಒಳಹರಿವಿತ್ತು. 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು.

ವಿರಾಜಪೇಟೆ ತಾಲೂಕಿನ ಭೇತ್ರಿ ಸಮೀಪ ತೋಟ ಹೊಲ, ಗದ್ದೆಗಳು ಜಲಾವೃತವಾಗಿವೆ. ಕಾವೇರಿ ಪ್ರತಾಪಕ್ಕೆ ತೋಟ, ಹೊಲ ಗದ್ದೆಗಳು ಜಲಾವೃತಗೊಂಡಿವೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೊಲಗದ್ದೆಗಳು ನದಿಗಳಂತೆ ಭಾಸವಾಗುತ್ತಿವೆ. ತೋಟಗಳಲ್ಲಿ 8 ರಿಂದ 10 ಅಡಿ ನೀರು ತುಂಬಿವೆ. ಇಲ್ಲಿ ಜನವಸತಿ ಪ್ರದೇಶಗಳು ಅಕ್ಕಪಕ್ಕದಲ್ಲೇ ಇವೆ. ಮಳೆ ತೀವ್ರಗೊಂಡಲ್ಲಿ ಜನವಸತಿ ಪ್ರದೇಶಗಳಿಗೂ ನೀರು ನುಗ್ಗುವ ಸಾಧ್ಯತೆಯಿದೆ.

ಸಿದ್ದಾಪುರದಲ್ಲಿ ಕಾಳಜಿ ಕೇಂದ್ರ:

ಭಾರಿ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮಕ್ಕೆ ಮುಳುಗಡೆ ಭೀತಿ ಉಂಟಾಗಿದೆ. ಕರಡಿಗೋಡಿನಲ್ಲಿ 180 ಕ್ಕೂ ಹೆಚ್ಚು ಕುಟುಂಬಗಳು ಇವೆ, ತಗ್ಗು ಪ್ರದೇಶದ 12 ಕುಟುಂಬಗಳನ್ನು ತಾಲೂಕು ಆಡಳಿತ ಸ್ಥಳಾಂತರ ಮಾಡಿದ್ದು, ಸಿದ್ದಾಪುರ ಕಲ್ಯಾಣ ಮಂಟಪದಲ್ಲಿ ಆಶ್ರಯ ನೀಡಲಾಗಿದೆ. ವಿರಾಜಪೇಟೆ ತಹಶೀಲ್ದಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಬರೆ ಕುಸಿತ: ಮಡಿಕೇರಿ - ಚೆಟ್ಟಳ್ಳಿ ರಸ್ತೆಯ ಅಬ್ಯಾಲ ಬಳಿ ಕುಸಿದಿರುವ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ಸಣ್ಣ ಪ್ರಮಾಣದ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ. ಮಣ್ಣು ತೆರವು ಕಾರ್ಯಾಚರಣೆ ನಡೆದಿದ್ದು, ಮಣ್ಣು ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ಮನೆಗಳಿಗೆ ಹಾನಿ:

ಕುಶಾಲನಗರ ಹೋಬಳಿಯ ದೊಡ್ಡತ್ತೂರು ಗ್ರಾಮದ ಲಕ್ಷ್ಮಣ ಕಾಳಯ್ಯ ಮನೆಯ ಗೋಡೆ ಹಾನಿಯಾಗಿದ್ದು, ಕಂದಾಯ ಪರಿವೀಕ್ಷಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ಮಾಲಂಬಿ ಗ್ರಾಮದ ಯಮುನಾ ರಾಮ್ ಶೆಟ್ಟಿ ವಾಸದ ಮನೆಯ ಮೇಲೆ ಭಾರಿ ಮಳೆ ಗಾಳಿಗೆ ಮರ ಬಿದ್ದು ಮನೆಗೆ ಹಾನಿಯಾಗಿದೆ. ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದ ಶಾರದಮ್ಮ, ಬಸವಯ್ಯ ಮತ್ತು ಬೆಟ್ಟಯ್ಯ, ತಿಮ್ಮಯ್ಯ ಇವರ ವಾಸದ ಮನೆಯು ತೀವ್ರ ಮಳೆಗೆ ಹಾನಿಯಾಗಿದೆ. ಈ‌ ಸಂಬಂಧ ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತಾತ್ಕಾಲಿಕವಾಗಿ ವಾಸಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.

ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಹಾಕತ್ತೂರು ಸಮೀಪ ಚೂರಿಕಾಡು -ತೊಂಬತ್ತು ಮನೆ ರಸ್ತೆಯಲ್ಲಿ ನಿರ್ಮಿಸಿದ್ದ ತಡೆಗೋಡೆ ಮಳೆಯಿಂದಾಗಿ ರಸ್ತೆ ಬದಿ ಕುಸಿದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋ ಹಳ್ಳಿ ಬರೆ ಕುಸಿತ, ಮಣ್ಣು ತೆರವುಗೊಳಿಸಲಾಗಿದೆ. .............ದೊಡ್ಡ ಕೆರೆಯೊಡೆದು, ಗದ್ದೆಗೆ ಹರಿದ ನೀರು, ಮೀನು ಹಿಡಿದ ಜನ!ಭಾರಿ ಮಳೆಯಿಂದಾಗಿ ಅಪಾರ ನೀರು ಸಂಗ್ರಹ ಪರಿಣಾಮ ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿಯ ರೊಂಡೆಕೆರೆ ಒಡೆದು ಹೋಗಿದ್ದು ಕೆರೆಯ ನೀರಿನಲ್ಲಿ ಮೀನು ಹಿಡಿದಿದ್ದಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಇರುವ ದೊಡ್ಡ ಕೆರೆ ಇದಾಗಿದ್ದು, ಕೆರೆ ಒಡೆದು ಹತ್ತಾರು ಎಕರೆ ಗದ್ದೆಗಳು ಹಾಳಾಗಿದೆ. ಇನ್ನೇನು ಬಿತ್ತನೆ ಮಾಡಬೇಕಾಗಿದ್ದ ಗದ್ದೆಗಳು ಸಂಪೂರ್ಣ ಹಾನಿಯಾಗಿದೆ. ಒಡೆದ ಕೆರೆಯಿಂದ ಅಪಾರ ಪ್ರಮಾಣದ ನೀರು ಹೊರಹೋಗುತ್ತಿದೆ. ಅಕಸ್ಮಾತ್ ಇನ್ನಷ್ಟು ಏರಿ ಒಡೆದರೆ ಕೆಳಭಾಗದಲ್ಲಿ ಮೀನು ಹಿಡಿಯುವವರಿಗೆ ಅಪಾಯ ಇದೆ. ಆದರೂ ಯಾವುದನ್ನೂ ಲೆಕ್ಕಿಸಿದೆ ಅಪಾರ ಸಂಖ್ಯೆಯಲ್ಲಿ ಜನರು ಮೀನು ಹಿಡಿದಿದ್ದಾರೆ.

ಮೀನು ಹಿಡಿಯುವುದನ್ನು ನೋಡುವುದಕ್ಕೂ ಜನರು ಮುಗಿಬಿದ್ದಿರು. ಹಲವು ವರ್ಷದಿಂದ ಹೂಳು ತೆಗೆಯದೇ ಇರುವುದೇ ಕೆರೆ ಏರಿ ಒಡೆಯಲು ಕಾರಣವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು