ದೇಶಾದ್ಯಂತ ಮತದಾರರ ಪಟ್ಟಿ ಕಡಿತ: ಇಂಡಿಯಾ ಮೈತ್ರಿ ಕೂಟದಿಂದ ಪ್ರತಿಭಟನೆ

KannadaprabhaNewsNetwork |  
Published : Oct 13, 2026, 01:45 AM IST
 | Kannada Prabha

ಸಾರಾಂಶ

ಎಸ್‌ಐಆರ್ ನಂತರ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳನ್ನು ರದ್ದುಗೊಳಿಸಬೇಕು. ಇನ್ಮುಂದೆ ಎಲ್ಲ ಚುನಾವಣೆಗಳನ್ನು ಇವಿಎಂ ಬದಲಿಗೆ ಮತ ಪತ್ರದ ಮುಖಾಂತರವೇ ನಡೆಯಬೇಕೆಂದು ಇಂಡಿಯಾ ಮೈತ್ರಿಕೂಟ ಆಗ್ರಹಿಸಿತು.

ಕನ್ನಡಪ್ರಭ ವಾರ್ತೆ ಬೀದರ್

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸೋಮವಾರ ಜಿಲ್ಲಾ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಜನವಾಡ ರಸ್ತೆಯಲ್ಲಿರುವ ಸಹಾಯಕ ಆಯುಕ್ತರ ಕಚೇರಿವರೆಗೆ ಮೆರವಣಿಗೆ ಮುಖಾಂತರ ತೆರಳಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಬ್ದುಲ್‌ ಮನ್ನಾನ್‌ ಸೇಠ್‌ ಮಾತನಾಡಿ, ಪ್ರಜಾತಂತ್ರ ಉಳಿವಿಗಾಗಿ ನಡೆಯುತ್ತಿರುವ ಸಂಘರ್ಷ ಈಗ ಅಂತಿಮ ರೂಪ ಪಡೆದು ಕೊಂಡಿದ್ದು, ಇದಕ್ಕಾಗಿ ಹೋರಾಡಲು ನಾವು ಸಿದ್ಧರಾಗಿದ್ದೇವೆ. ಕಾಂಗ್ರೆಸ್‌, ಸಿಪಿಐ, ಸಿಪಿಐ(ಎಂ) ಪಕ್ಷಗಳ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸಲಾ ಗುತ್ತಿದೆ. ಪ್ರಜಾತಂತ್ರ ವಿರೋಧಿ ಕೆಲಸ ಮಾಡುತ್ತಿರುವ ಸಿಇಸಿ ಜ್ಞಾನೇಶಕುಮಾರ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಎಸ್‌ಐಆರ್ ನಂತರ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳನ್ನು ರದ್ದುಗೊಳಿಸಬೇಕು. ಇನ್ಮುಂದೆ ಎಲ್ಲ ಚುನಾವಣೆಗಳನ್ನು ಇವಿಎಂ ಬದಲಿಗೆ ಮತ ಪತ್ರದ ಮುಖಾಂತರವೇ ನಡೆಯಬೇಕೆಂದು ಆಗ್ರಹಿಸಿದರು.

ಸಿಪಿಐ(ಎಂ) ಮುಖಂಡ ಬಾಬುರಾವ ಹೊನ್ನಾ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದೆ. ದೇಶದ ಸಂಪತ್ತನ್ನು ಖಾಸಗೀಕರಣ ಮಾಡಲಾಗುತ್ತಿದೆ, ಜನರನ್ನು ಶೋಷಿತರನ್ನಾಗಿ ಮಾಡಲಾಗುತ್ತಿದೆ. ಶಾಂತಿಯುತವಾಗಿ ಪ್ರತಿಭಟಿಸುವ ನಾಗರಿಕರನ್ನು ಶತ್ರುಗಳಂತೆ ಪರಿಗಣಿಸುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿಗಳಾದ ಅರವಿಂದಕುಮಾರ ಅರಳಿ, ಕೆ. ಪುಂಡಲಿಕ್ ರಾವ್, ಬುಡಾ ಅಧ್ಯಕ್ಷ ವಿನೋದ್ ಕುಮಾರ್ ಅಪ್ಪೆ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ, ರಾಜಶ್ರೀ ಸ್ವಾಮಿ, ನಾಸೀರ್ ಖಾನ್, ರೇಷ್ಮಾ ಹಂಸರಾಜ, ಶಂಕರ್ ರಾವ್ ದೊಡ್ಡಿ, ಸಂಜಯ್ ಜಾಗಿರದಾರ, ಎಂ.ಎ. ಸಮಿ, ದತ್ತಾತ್ರೇಯ ಮೂಲಗೆ, ಅಹಸನ ಕಮಾಲ್ ಪರ್ವೇಜ್, ಜಾರ್ಜ ಫರ್ನಾಂಡಿಸ್, ಇರ್ಷಾದ ಪೈಲ್ವಾನ್, ಪಂಡಿತರಾವ್ ಚಿದ್ರಿ, ಶಂಕರ್ ರೆಡ್ಡಿ, ಪ್ರದೀಪ ಕುಶ್ನೂರ್, ಅಜ್ಮತ್ ಪಟೇಲ್, ಡಾ. ಮಕ್ಸುದ್ ಚಂದಾ, ವಿಠಲ್ ದಾಸ್ ಪ್ಯಾಗೆ, ಹನುಮಂತ್ ಮಲ್ಕಾಪುರೆ, ಮೋಹನ್ ಕಳೇಕರ್, ಸುನಿಲ್ ಬಚ್ಚನ್, ಮೊಹಮ್ಮದ್ ಯೂಸುಫ್, ರಾಜಕುಮಾರ್ ಹಲಬರ್ಗೆ, ಚಂದ್ರಶೇಖರ್ ಪಾಟೀಲ್, ಗೋವರ್ಧನ ರಾಠೋಡ, ಶರಣಪ್ಪ ಶರ್ಮಾ, ಚಂದ್ರಶೇಖರ್ ಚನ್ನಶೆಟ್ಟಿ, ಡಿ.ಕೆ. ಸಂಜುಕುಮಾರ್, ವಿಶಾಲ ದೊಡ್ಡಿ ಸೇರಿದಂತೆ ಕಾಂಗ್ರೆಸ್‌, ಸಿಪಿಐ, (ಸಿಪಿಐ(ಎಂ) ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಎಸ್‌ಐಆರ್ ಆರ್‌ಎಸ್‌ಎಸ್‌ನ ಅಜೆಂಡಾ

ಕಲಬುಗಿಯ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಿಂದ ಕೋಟ್ಯಂತರ ಮತದಾರರ ಹೆಸರುಗಳು ಪಟ್ಟಿಯಿಂದ ಅಳಿಸಲ್ಪಟ್ಟಿವೆ. ಇದು ನಾಗರಿಕರ ಸಾಂವಿಧಾನಿಕ ಮತದಾನದ ಹಕ್ಕಿನ ಮೇಲಿನ ನೇರ ಪರಿಣಾಮವಾಗಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ ಬಿಜೆಪಿ ಪಕ್ಷದ ಏಜೆಂಟ್‌ ಆಗಿ ಬಿಜೆಪಿಯ ಅಣತಿಯಂತೆ ಸರ್ವಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್‌ಐಆರ್ ಆರ್‌ಎಸ್‌ಎಸ್‌ನ ಅಜೆಂಡಾ, ಇದು ಸಿಎಎ, ಎನ್‌ಆರ್‌ಸಿ ಮುಂದುವರೆದ ಭಾಗವೇ ಆಗಿದೆ ಎಂದು ಆರೋಪಿಸಿದ ಅವರು ದೇಶದಲ್ಲಿ ಎಸ್‌ಐಆರ್ ಹೆಸರಿನಲ್ಲಿ 13 ಕೋಟಿ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗಪಟ್ಟಣ ದಸರಾಗೆ ಯುವ ಸಂಭ್ರಮ ಹೊಸ ಮೆರುಗು: ಅದಿತಿ ಪ್ರಭುದೇವ
ಮೇಲುಕೋಟೆ: ಅ.16 ರಿಂದ 19ರವರೆಗೆ ನವರಾತ್ರಿ ಸಂಗೀತ-ನೃತ್ಯೋತ್ಸವ