- ಜಗಳೂರಲ್ಲಿ ಅಧ್ಯಕ್ಷ ಬಿ.ಕುಮಾರ್ ಆಕ್ರೋಶ । ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ
ಜಗಳೂರು: ನಿರಂತರ ಮಳೆ ಅಭಾವದಿಂದಾಗಿ ತೀವ್ರ ಕಷ್ಟಕ್ಕೆ ಸಿಲುಕಿರುವ ಜಗಳೂರು ತಾಲೂಕಿನ ರೈತರಿಗೆ ರಾಜ್ಯ ಸರ್ಕಾರ ಕೇವಲ ₹2,500 ಅಲ್ಪ ಮೊತ್ತದ ಬರ ಪರಿಹಾರ ಘೋಷಿಸಿರುವುದು ‘ಗಾಯದ ಮೇಲೆ ಬರೆ ಎಳೆದಂತಾಗಿದೆ’ ರೈತರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಡಾ. ವಾಸುದೇವ್ ಮೇಟಿ ಬಣ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ತಾಲೂಕು ಅಧ್ಯಕ್ಷ ಬಿ.ಕುಮಾರ್ ಭರಮಸಮುದ್ರ ಪ್ರತಿಭಟನೆಯಲ್ಲಿ ಮಾತನಾಡಿ, "ಜಗಳೂರು ತಾಲೂಕು ಬರಪೀಡಿತ ಪ್ರದೇಶವೆಂದು ಎಲ್ಲರಿಗೂ ತಿಳಿದಿದೆ. ಇಲ್ಲಿನ ಬಹುತೇಕ ರೈತರು ಸಂಪೂರ್ಣ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಈ ಬಾರಿ ಮಳೆಯಾಗದೇ ಮೆಕ್ಕೆಜೋಳ, ಜೋಳ, ರಾಗಿ, ಸಜ್ಜೆ, ಕಡಲೆ, ಶೇಂಗಾ ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಬಿತ್ತನೆಬೀಜ, ರಸಗೊಬ್ಬರ, ಕೃಷಿ ಔಷಧಿಗಾಗಿ ರೈತರು ಸಾಲ ಮಾಡಿ ಸಂಕಷ್ಟದ ಸುಳಿಗೆ ಸಿಲುಕಿ ನಲುಗುತ್ತಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರೈತರಿದ್ದರೂ ಸರ್ಕಾರ ಕೇವಲ ₹2,500 ಪರಿಹಾರ ಮೊತ್ತ ಘೋಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಕರೆಗೆ ₹50,000 ಪರಿಹಾರ ನೀಡಿ:
ರೈತ ಮುಖಂಡ ಜಗದೀಶ್ ಮಾತನಾಡಿ, ಪ್ರಮಾಣ ವಚನ ಸ್ವೀಕರಿಸುವಾಗ ರೈತರ ಹಿತ ಕಾಯುತ್ತೇವೆ ಎಂದು ಮಾತು ನೀಡುವ ಜನಪ್ರತಿನಿಧಿಗಳು, ಅಧಿಕಾರಕ್ಕೆ ಬಂದ ಮೇಲೆ ರೈತರ ಕಟ್ಟುವ ತೆರಿಗೆ ಹಣದಲ್ಲಿ ಲಕ್ಷಾಂತರ ರು. ಸಂಬಳ ಪಡೆದು, ಎಸಿ ಕಾರು ಮತ್ತು ಎಸಿ ಕೊಠಡಿಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ, ಬೆವರು ಹರಿಸಿ ಅನ್ನ ನೀಡುವ ರೈತನ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸರ್ಕಾರ ತಕ್ಷಣವೇ ಎಚ್ಚೆತ್ತು ರೈತರ ಪರವಾಗಿ ನಿಲ್ಲಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದುಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸೂರಪ್ಪ, ಪಾಲನಾಯಕ, ಚನ್ನಪ್ಪ, ಶಾಮಣ್ಣ, ಮಾಂತೇಶ್, ಗೋವಿಂದಪ್ಪ, ತಿಪ್ಪೇಸ್ವಾಮಿ, ಏಕಾಂತಪ್ಪ, ಬೋರಯ್ಯ, ಗುಂಡಪ್ಪ, ವಾಸಣ್ಣ, ಮಂಜುನಾಥ್, ನೂರಾರು ರೈತರು ಭಾಗವಹಿಸಿದ್ದರು.
-12ಜೆಜಿಎಲ್1: