ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ತಮಟೆ ಚಳವಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿದ ಬಳಿಕ ಮತ್ತೆ ತಾಲೂಕು ಕಚೇರಿ ಮುಂದೆ ಸಮಾವೇಶ ಗೊಂಡು ಜಿಲ್ಲಾಡಳಿತ,ಉಸ್ತುವಾರಿ ಸಚಿವರು ಮತ್ತು ಶಾಸಕರ ವಿರುದ್ಧ ರೈತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
50 ದಿನವಾದರೂ ಸ್ಪಂದಿಸದ ಆಡಳಿತದ ಬಗ್ಗೆ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ತಾಲೂಕು ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.ಜಿಲ್ಲಾ ಮತ್ತು ತಾಲೂಕು ಆಡಳಿತ ಬದುಕಿದೆಯಾ? ಸತ್ತಿದೆಯಾ? ಎಂಬಂತಾಗಿದೆ.50 ದಿನಗಳಿಂದ ರೈತಸಂಘದ ಕಾರ್ಯಕರ್ತರು ಮಳೆ, ಬಿಸಿಲು, ಚಳಿ ಎನ್ನದೆ ಕುಳಿತು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದ ಮೇಲೆ ಜಿಲ್ಲಾಡಳಿತಕ್ಕೆ ಮಾನ ಇಲ್ಲ ಎಂದರು.
50 ದಿನಗಳಿಂದ ಪ್ರತಿದಿನ ಎರಡೆರಡು ಸಾಗುವಳಿ ಅರ್ಜಿ ರೆಡಿ ಮಾಡಿದರೂ ಇಂದಿಗೆ ೧೦೦ಆಗಬೇಕಿತ್ತು.ಆದರೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಟೇಬಲ್ ಕೆಳಗೆ ಕೊಟ್ಟರೆ ಮೂರು ದಿನದಲ್ಲಿ ಕೆಲಸ ಆಗುತ್ತದೆ.70 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಆದರೆ ಗಣಿಗಾರಿಕೆಗೆ ಅನುಮತಿ ನೀಡಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಅರಣ್ಯ ಇಲಾಖೆಯು ರೈತರಿಗೆ ಮೋಸ ಮಾಡಿ ಬರೆಸಿಕೊಂಡಿದ್ದಾರೆ.ಯಾವ ರೈತರಿಗೆ ಅರಣ್ಯ ಇಲಾಖೆ ತೊಂದರೆ ಕೊಟ್ಟರೂ ನಾವು ಸುಮ್ಮನಿರುವುದಿಲ್ಲ.ನಾವು ಜೈಲಿಗೆ ಹೋದರೂ ಯೋಚನೆ ಮಾಡುವುದಿಲ್ಲ. ಯಾವುದೇ ಅಧಿಕಾರಿಗಳು ಬಂದರೂ ಜಮೀನನ್ನು ಬಿಡಬೇಡಿ,ನೂರು ಕೇಸ್ ಹಾಕಿದರೂ ಬಿಡಬೇಡಿ ಎಂದರು.
ರೈತರ ಪರವಾಗಿದ್ದರೆ ಶಾಸಕರು ಒಂದು ದಿನ ನಮ್ಮ ಜೊತೆ ಬಂದು ಕುಳಿತುಕೊಳ್ಳಬೇಕು.ರೈತರಿಗೆ ಕೊಟ್ಟ ಮಾತಿನಂತೆ ಶಾಸಕರು ನಡೆದುಕೊಂಡಿಲ್ಲ.ಕೆರೆ ನೀರಿನ ವಿಚಾರದಲ್ಲೀ ಮಾತಿಗೆ ತಪ್ಪಿದ್ದಾರೆ.ಸಾಗುವಳಿ ಚೀಟಿ ನೀಡಲು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.