-ರೇಷ್ಮೆ ಹರಾಜು ಪ್ರಕ್ರಿಯೆ ವೇಳೆ ರೀಲರ್ಸ್ ಬಣಗಳ ಮಾತಿನ ಚಕಮಕಿ, ಕಿತ್ತಾಟ । ಇಬ್ಬರಿಗೆ ಗಾಯ ಕನ್ನಡಪ್ರಭ ವಾರ್ತೆ ರಾಮನಗರ
ರೇಷ್ಮೆ ಗೂಡು ಬಿಡ್ ಕೂಗುವ ವಿಚಾರವಾಗಿ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್ಸ್ ನಡುವೆ ಭಾನುವಾರ ಮಾರಾಮಾರಿ ನಡೆದಿದೆ.ಚನ್ನಪಟ್ಟಣದ ಹೊಂಗನೂರಿನ ರೀಲರ್ಸ್ ಗಳು ಎಂದಿನಂತೆ ರಾಮನಗರದ ಮಾರುಕಟ್ಟೆಯಲ್ಲಿ ರೇಷ್ಮೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಹೆಚ್ಚುವರಿ ಬೆಲೆ ಕೂಗಿದ ವಿಚಾರವಾಗಿ ರೀಲರ್ಸ್‌ನ ಒಂದು ಬಣ ವಾಗ್ವಾದ ನಡೆಸಿದೆ. ಮಾತಿನ ಚಕಮಕಿ ತಾರಕಕ್ಕೇರಿ ಇಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆದಿದೆ.
ಈ ಬಗ್ಗೆ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಸಮೀರ್ ಅಹಮದ್, ನಾವು ಪರವಾನಗಿ ಪಡೆದ ರೀಲರ್ ಆಗಿದ್ದು, ಎಂದಿನಂತೆ ರಾಮನಗರ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೇವೆ. ಗೂಡು ತೂಕ ಮಾಡಿ ಮಾರುಕಟ್ಟೆಗೆ ಹಣ ಪಾವತಿಸುವ ವೇಳೆ ಏಕಾಏಕಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಮಾರುಕಟ್ಟೆಗೆ ಬರದಂತೆ ಜೀವ ಬೆದರಿಕೆ ಹಾಕಿದ್ದಾರೆ. ಮೋಸೀನ್, ನವಾಜ್, ಪರ್ವಿಜ್ ಮತ್ತು ರೂಮಾನ್ ಅವರು ನಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇವರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಕೋರಿದ್ದಾರೆ.ನಿಮ್ಮ ಊರಿನ ಮಾರುಕಟ್ಟೆಗೆ ಹೋಗಿ ರೇಷ್ಮೆ ಗೂಡನ್ನು ಖರೀದಿಸಿ ಇಲ್ಲಿಗೆ ಏಕೆ ಬರುತ್ತೀರಿ, ರಾಮನಗರದ ಮಾರುಕಟ್ಟೆಗೆ ಕಾಲಿಟ್ಟರೆ ನಿಮ್ಮನ್ನು ಕೊಲೆ ಮಾಡುತ್ತೇವೆ. ಇನ್ನು ಮುಂದೆ ರಾಮನಗರದ ಮಾರು ಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಖರಿದಿಸಬಾರದು ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ರೇಷ್ಮೆ ಗೂಡಿನ ಮಾರುಕಟ್ಟೆಯ ಸಿಸಿ ಟಿವಿ ಕ್ಯಾಮರಾಗಳಲ್ಲಿ ಈ ಎಲ್ಲಾ ಘಟನೆ ಸೆರೆಯಾಗಿವೆ. ಮೋಸೀನ್, ನವಾಜ್, ಪರ್ವಿಜ್, ರೂಮಾನ್, ರಾಜು ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನಮಗೆ ನ್ಯಾಯ ಒದಗಿಸಿಕೊಡಿ ಎಂದು ದೂರು ದಾಖಲಿಸಿದ್ದಾರೆ.ಹೊರಗಿನ ರೀಲರ್ಸ್‌ಗಳು ರಾಮನಗರ ಮಾರುಕಟ್ಟೆ ಹರಾಜಿನಲ್ಲಿ ಭಾಗವಹಿಸಬಾರದೆ, ಹೆಚ್ಚಿನ ಬೆಲೆಗೆ ಗೂಡು ಖರೀದಿಸಬಾರದೆ ಎಂದು ಸಮೀರ್ ಅಹಮದ್ ಪ್ರಶ್ನಿಸಿದ್ದಾರೆ. ಠಾಣೆ ಬಳಿಯು ಉಭಯ ಬಣಗಳ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಗುಂಪು ಚದುರಿಸಿದರು.