ಕನ್ನಡಪ್ರಭ ವಾರ್ತೆ ಬೆಳಗಾವಿ ಯುವ ಸಂಪನ್ಮೂಲ ಹೆಚ್ಚಿರುವ ಭಾರತದಲ್ಲಿ ಯುವಜನರ ಆರೋಗ್ಯ ಮತ್ತು ಬೌದ್ಧಿಕ ವಿಕಸನದ ಜವಾಬ್ದಾರಿ ಸರ್ಕಾರದಷ್ಟೇ ಸಮಾಜದ ಪ್ರತಿಯೊಬ್ಬ ಹಿರಿಯ ನಾಗರಿಕರ ಮೇಲಿದೆ ಎಂದು ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಯುವ ಸಂಪನ್ಮೂಲ ಹೆಚ್ಚಿರುವ ಭಾರತದಲ್ಲಿ ಯುವಜನರ ಆರೋಗ್ಯ ಮತ್ತು ಬೌದ್ಧಿಕ ವಿಕಸನದ ಜವಾಬ್ದಾರಿ ಸರ್ಕಾರದಷ್ಟೇ ಸಮಾಜದ ಪ್ರತಿಯೊಬ್ಬ ಹಿರಿಯ ನಾಗರಿಕರ ಮೇಲಿದೆ ಎಂದು ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಹೇಳಿದರು.
ನಗರದ ಮಹಾಂತೇಶ ನಗರದ ಬ್ರಹ್ಮಕುಮಾರೀಸ್ ಜಿಲ್ಲಾ ಕೇಂದ್ರದಲ್ಲಿ ಭಾನುವಾರ ಬ್ರಹ್ಮಕುಮಾರೀಸ್ ಜಾಗತಿಕ ಮುಖ್ಯಸ್ಥರಾದ ದಿವಂಗತ ದಾದಿ ಪ್ರಕಾಶಮಣಿ ಅವರ 19ನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನರು ಕುಡಿತ, ಗುಟ್ಕಾ, ಜೂಜು ಮೊದಲಾದ ಸಾಂಪ್ರದಾಯಿಕ ವ್ಯಸನಗಳ ಜೊತೆಗೆ ಡ್ರಗ್ಸ್, ಗಾಂಜಾ, ಚರಸ್ ಸೇರಿದಂತೆ ಅಪಾಯಕಾರಿ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇದಲ್ಲದೆ, ಮೊಬೈಲ್, ಸಾಮಾಜಿಕ ಜಾಲತಾಣಗಳು, ರೀಲ್ಸ್, ಆನ್‌ಲೈನ್ ಗೇಮಿಂಗ್ ಹಾಗೂ ಡಿಜಿಟಲ್ ವೇದಿಕೆಗಳ ಅತಿಯಾದ ಬಳಕೆಯೂ ಹೊಸ ಮಾದರಿಯ ಡಿಜಿಟಲ್ ನಶೆಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಗಳು ವಿವಿಧ ಇಲಾಖೆಗಳ ಮೂಲಕ ನಶಾಮುಕ್ತ ಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸುತ್ತಿವೆ. ಇದಕ್ಕೆ ಸಾರ್ವಜನಿಕರು ಹಾಗೂ ಯುವ ಸಮೂಹ ಸಹಕರಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಡಿ.ವೈ.ಬಸಾಪುರ ಮಾತನಾಡಿ, 2003ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಸಿಗರೇಟ್ ಬಳಕೆ ನಿಯಂತ್ರಣಕ್ಕೆ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಯಾವುದೇ ರೀತಿಯ ಮಾದಕ ವ್ಯಸನದಲ್ಲಿ ತೊಡಗುವುದು ದಂಡನೀಯ ಅಪರಾಧವಾಗಿದೆ. ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆಗಳಿದ್ದರೂ ಜನರು ವ್ಯಸನಗಳಿಂದ ದೂರವಾಗದಿರುವುದು ವಿಷಾದನೀಯ. ಮಾದಕ ವಸ್ತುಗಳ ಪೂರೈಕೆಯ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿದ್ದು, ಯುವಜನರು ಇಂತಹ ಜಾಲಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಅವರು ತಿಳಿಸಿದರು.
ಬೈಲಹೊಂಗಲ ಸಿವಿಲ್ ನ್ಯಾಯಾಧೀಶೆ ರೋಹಿಣಿ ಬಸಾಪುರ ಮಾತನಾಡಿ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿಯೂ ವ್ಯಸನದ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ. ತಾತ್ಕಾಲಿಕ ಸಂತೋಷ ನೀಡುವ ವ್ಯಸನಗಳು ದೀರ್ಘಾವಧಿಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಪಾಲಕರು ಹಾಗೂ ಹಿರಿಯರ ಮಾರ್ಗದರ್ಶನವನ್ನು ಯುವಜನತೆ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಎಲುಬು ಮತ್ತು ಕೀಲು ತಜ್ಞ ವೈದ್ಯ ಡಾ.ಅನಿಲ ಪಾಟೀಲ ಮಾತನಾಡಿ, 18 ರಿಂದ 35 ವರ್ಷದೊಳಗಿನ ಯುವಕರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ವೈದ್ಯಕೀಯ ಸೇವೆಯಲ್ಲಿ ಗಮನಕ್ಕೆ ಬಂದಿದೆ. ವ್ಯಸನ ಹಾಗೂ ಮಾನಸಿಕ ಒತ್ತಡದಿಂದ ಜೀವನ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಯುವಜನರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬ್ರಹ್ಮಕುಮಾರೀಸ್ ಜಿಲ್ಲಾ ಮುಖ್ಯಸ್ಥೆ ಬಿ.ಕೆ.ಅಂಬಿಕಾ ದೀದಿ ಮಾತನಾಡಿ, ಮಕ್ಕಳನ್ನು ಸದೃಢ ವ್ಯಕ್ತಿತ್ವ ಹೊಂದಿದ ವಿಶ್ವಮಾನವರನ್ನಾಗಿ ರೂಪಿಸಲು ಮೌಲ್ಯಾಧಾರಿತ ಶಿಕ್ಷಣ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾದಕ ವ್ಯಸನದಿಂದ ದೂರ ಇರುವ ಕುರಿತು ಯುವಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಡಾ.ಸಂಗೀತಾ ಬೆಳಗಾವಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಕೆ.ಜ್ಯೋತಿ ದೀದಿ ನಿರೂಪಿಸಿದರು. ಬುಡಾ ಮಾಜಿ ಅಭಿಯಂತರ ಮಹಾಂತೇಶ ಹಿರೇಮಠ, ರಾಜಯೋಗಿನಿ ಬಿಕೆ ಮೀರಾ ದೀದಿ, ಬಿಕೆ ವಿದ್ಯಾ, ಬಿಕೆ ಮೀನಾಕ್ಷಿ, ಬಿಕೆ ಪ್ರತಿಭಾ, ಬಿಕೆ ಸುಲೋಚನ, ಬಿಕೆ ದೇವಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.