ಗದಗ: ರೀಲ್ಸ್ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟ ಇಲ್ಲಿನ ಜಿಮ್ಸ್ ಆಸ್ಪತ್ರೆಯ 8 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಒಂದು ವಾರ ಕಾಲೇಜಿನಿಂದ ಅಮಾನತು ಮಾಡಿದೆ. ವಿದ್ಯಾರ್ಥಿಗಳು ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಎದುರೇ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು, ಪೇಶೆಂಟ್ ಜಸ್ಟ್ ಮೋಯಾ.. ಮೋಯಾ.. ಎಂಬ ಅಡಿಬರಹದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ನಟ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರದ ‘ಹಲೋ ಮೈ ಲವ್ಲಿ ಲೇಡಿ ಹೂ ಆರ್ ಯು, ಹೂ ಆರ್ ಯು’ ಹಾಡಿಗೆ ಮತ್ತು ಹಿಂದಿ ಚಿತ್ರ ಹಾಡಿಗೆ ಇನ್ಸಾಸ್ಟಾ ಗ್ರಾಮ್‌ನಲ್ಲಿ ರೀಲ್ಸ್ ಮಾಡಿದ್ದಾರೆ. ಜಿಮ್ಸ್ ಆಸ್ಪತ್ರೆಯ ಕಾರಿಡಾರ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವಿದ್ಯಾರ್ಥಿಗಳು ಆಸ್ಪತ್ರೆಯೊಳಗೆ ತೀವ್ರ ನಿಗಾ ಘಟಕ, ಶಿಶುವಿಗೆ ಆರೈಕೆ ಮಾಡುವುದು, ರೋಗಿಗಳಿಗೆ ಚಿಕಿತ್ಸೆ ನೀಡುವುದು, ಚೀಟಿ ಬರೆಯುವುದು ಸೇರಿ ಜಿಮ್ಸ್ ಕ್ಯಾಂಪಸ್‌ನ್ನು ಬಳಸಿಕೊಂಡು ಎಲ್ಲೆಂದರಲ್ಲಿ ರೀಲ್ಸ್ ಮಾಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ನಿಮ್ಮ ಹುಚ್ಚಾಟಕ್ಕೆ ಬೇರೆ ಜಾಗ ಸಿಗಲಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಕಂಡ ಸಾರ್ವಜನಿಕರು ರೋಗಿಗಳ ಆರೈಕೆ ಮಾಡಬೇಕಾದವರು. ಈ ರೀತಿ ಆಸ್ಪತ್ರೆಯಲ್ಲಿ ರೀಲ್ಸ್ ಮಾಡುತ್ತಾ ಕುಳಿತರೆ ಹೇಗೆ ಎನ್ನುವ ಆಕ್ರೋಶ ಕೂಡಾ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇದನ್ನು ಗಮನಿಸಿದ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಅವರು ಒಂದು ವಾರಗಳ ಕಾಲ 8 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ.