- ಪೊಲೀಸ್ ಇಲಾಖೆಯಿಂದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ: ಕರಿಯಪ್ಪ ಆರೋಪ
- - -- ಮಗನ ಮೇಲೆ ಹಲ್ಲೆ ಕುರಿತ ಸಿಸಿ ಕ್ಯಾಮೆರಾ ದೃಶ್ಯಗಳು ತಮಗೆ ದೊರೆತಿದ್ದರೂ ಸ್ಪಂದಿಸುತ್ತಿಲ್ಲ - ರಾಹುಲ್ ಎಂಬಾತ ಪವನ್ ಜತೆ ಜಗಳ ಮಾಡಿಕೊಂಡು, ವೈಮನಸ್ಸು ಬೆಳೆಸಿಕೊಂಡಿದ್ದ
- ಮತ್ಸರದಿಂದ ಪವನ್‌ನನ್ನು ರಾಹುಲ್ ಕೊಲೆ ಮಾಡಿರುವ ಅನುಮಾನ: ಪೋಷಕರು- - -
ಕನ್ನಡಪ್ರಭ ವಾರ್ತೆ ದಾವಣಗೆರೆಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿಕೊಂಡು ಲಕ್ಷಾಂತರ ಫಾಲೋವರ್ಸ್ ಹೊಂದಿದ್ದ ತಮ್ಮ ಮಗ ಮಾ.5ರಂದು ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದು, ಇದನ್ನು ಪುಷ್ಠೀಕರಿಸಲು ಸಿಸಿ ಕ್ಯಾಮೆರಾ ಫುಟೇಜ್ ಸಾಕ್ಷಿಗಳಿವೆ. ಆದರೂ, ಪ್ರಕರಣ ಮುಚ್ಚಿ ಹಾಕುವ ಕೆಲಸ ಪೊಲೀಸ್ ಇಲಾಖೆಯಿಂದ ಆಗುತ್ತಿದೆ ಎಂದು ಮೃತ ಪವನ್ ತಂದೆ ತರಗಾರ ಕೆಲಸ ಮಾಡುವ ಕರಿಯಪ್ಪ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ರ ಪವನ್ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿಕೊಂಡು ಲಕ್ಷಾಂತರ ಫಾಲೋವರ್ಸ್ ಹೊಂದಿದ್ದ. ಈ ಕಲೆಯ ಪ್ರಮೋಷನ್‌ನಿಂದ ಬರುತ್ತಿದ್ದ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ತಮ್ಮ ನಾಲ್ವರು ಮಕ್ಕಳ ಪೈಕಿ 3ನೆಯ ಮಗ ಪವನ್ ನಿಗೂಢ ಸಾವಾಗಿದೆ. ಮಗನ ಸಾವಿಗೆ ನ್ಯಾಯ ಬೇಕು ಎಂದರು.ನಾಲ್ವರು ಮಕ್ಕಳಲ್ಲಿ ಇಬ್ಬರು ಹೆಣ್ಣುಮಕ್ಕಳು ಹಿರಿಯರು. ಇಬ್ಬರು ಗಂಡುಮಕ್ಕಳಲ್ಲಿ ಪವನ್ ಹಿರಿಯ. ಪವನ್ ಜೊತೆಗೆ ರಾಹುಲ್ ಎಂಬಾತ ಜಗಳ ಮಾಡಿಕೊಂಡು, ವೈಮನಸ್ಸು ಬೆಳೆಸಿಕೊಂಡಿದ್ದ. ತಮ್ಮ ಮಗ ಬೆಳೆಯಬಾರದೆಂಬ ಮತ್ಸರದಿಂದ ಆತನೇ ತಮ್ಮ ಮಗನನ್ನು ಕೊಲೆ ಮಾಡಿರುವ ಅನುಮಾನವಿದೆ. ತಮ್ಮ ಮಗನಿಗೆ ಮಾ.5ರ ಸಂಜೆ ಕರೆ ಮಾಡಿ, ಕರೆಸಿಕೊಂಡು ರಾತ್ರಿ 12.30ಕ್ಕೆ ಇತರೆ ಐವರೊಂದಿಗೆ ಸೇರಿ, ಹಲ್ಲೆ ಮಾಡಿದ್ದಾರೆ. ಅನಂತರ ಪವನ್ ಸಾವನ್ನಪ್ಪಿದ್ದಾನೆ. ಆದರೆ, ಪವನ್ ಅಪಘಾತದಲ್ಲಿ ಗಾಯಗೊಂಡಿದ್ದಾನೆ ಎಂದು ಬಿಂಬಿಸಲು ಖಾಸಗಿ ಆಸ್ಪತ್ರೆಗೂ ದಾಖಲು ಮಾಡಿದ್ದಾರೆ. ಆದರೆ, ಮಗನ ಬೈಕ್ ಮುಂಭಾಗವಷ್ಟೇ ಅಲ್ಲ, ಹಿಂಭಾಗವೂ ನುಜ್ಜುಗುಜ್ಜಾಗಿದೆ. ಇದನ್ನು ನೋಡಿದಾಗಲೇ ಪವನ್ ಅಪಘಾತದ ಸತ್ತಿಲ್ಲವೆಂಬ ಅನುಮಾನ ನಮಗೆ ಕಾಡಿತ್ತು ಎಂದು ತಿಳಿಸಿದರು.
ಮಗನ ಮೇಲೆ ಹಲ್ಲೆ ಮಾಡಿದಾಗ ಸಿಸಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳು ತಮಗೆ ದೊರೆತಿವೆ. ಅಪಘಾತದಲ್ಲಿ ಮಗನ ಮೊಬೈಲ್‌ಗೆ ಸಣ್ಣ ಹಾನಿಯೂ ಆಗಿಲ್ಲ. ಇದನ್ನೆಲ್ಲಾ ಗಮನಿಸಿದರೆ, ಪವನ್ ಅಪಘಾತದಲ್ಲಿ ಸತ್ತಿಲ್ಲ. ಆತನ ಕೊಲೆ ಆಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಗೂ ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇವೆ. ಅನಂತರ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ತಮ್ಮ ದೂರನ್ನು ಪರಿಗಣಿಸಿಲ್ಲ. ಈ ಘಟನೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ, ಸಂಚಾರ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿಕಳಿಸಿದರು. ಮಗ ಪವನ್ ಸಾವಿಗೆ ನ್ಯಾಯ ಸಿಗಬೇಕು, ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಟೀ ಅಂಗಡಿ ನಡೆಸುವ ತಾಯಿ ಪುಷ್ಪಾ, ಸಂಬಂಧಿಗಳಾದ ಗೌರಮ್ಮ, ಸಿದ್ದಣ್ಣ, ನಿಂಗಣ್ಣ ಇತರರು ಇದ್ದರು.
- - --20ಕೆಡಿವಿಜಿ4, 5.ಜೆಪಿಜಿ:
ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಫೇಮಸ್ ಆಗಿದ್ದ ಮೃತ ಪವನ್ ಸಾವಿಗೆ ನ್ಯಾಯ ಹಾಗೂ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ದಾವಣಗೆರೆಯಲ್ಲಿ ತಂದೆ ಕರಿಯಪ್ಪ, ತಾಯಿ ಪುಷ್ಪಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.