ಮಹೇಶ ಛಬ್ಬಿ
ಈಗಾಗಲೇ ರೈತಾಪಿ ವರ್ಗ ಮುಂಗಾರು ಬಿತ್ತನೆಗೆ ಹೊಲಗಳನ್ನ ರಂಟಿ ಹೊಡೆದು, ಹರಗಿ ಹದಗೊಳಿಸಿ ಬೀಜ ಬಿತ್ತನೆಗೆ ಸಿದ್ಧತೆ ನಡೆಸಿದ್ದ ರೈತರಿಗೆ ಕೃತಿಕಾ ಮಳೆ ಜೀವ ಕಳೆಯನ್ನು ತುಂಬಿದೆ.
ಸತತವಾಗಿ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗಾಲಾದ ರೈತರಿಗೆ ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆ ಪ್ರಾರಂಭದಲ್ಲಿಯೇ ಉತ್ತಮವಾಗಿ ಸುರಿದಿದ್ದು, ರೈತರ ಸಂತಸವನ್ನ ಇಮ್ಮಡಿಗೊಳಿಸಿದೆ.3.06 ಲಕ್ಷ ಹೆ. ಪ್ರದೇಶದಲ್ಲಿ ಬಿತ್ತನೆ ಗುರಿ:1ನೇ ಮಾರ್ಚ್ 2025ರಿಂದ 17ನೇ ಮೇ 2025ರ ವರೆಗೆ ಸರಾಸರಿ 68 ಮಿ.ಮೀ. ವಾಡಿಕೆ ಮಳೆಗೆ 102 ಮಿ.ಮೀ.ಯಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮೆಕ್ಕೆಜೋಳ 1.15 ಲಕ್ಷ ಹೆ., 1.33 ಲಕ್ಷ ಹೆ. ಹೆಸರು, 21000 ಹೆ. ಶೇಂಗಾ, 7500 ಹೆ. ಸೂರ್ಯಕಾಂತಿ, ಹಾಗೂ 17000 ಹೆ. ಹತ್ತಿ ಸೇರಿದಂತೆ ಒಟ್ಟು 3.06 ಲಕ್ಷ ಹೆ. ಪ್ರದೇಶದಲ್ಲಿ ಬಿತ್ತನೆ ಕ್ಷೇತ್ರದ ಗುರಿ ಇದೆ.
ಕಾಳ ಸಂತೆಯಲ್ಲಿ ಮಾರಾಟ ಮಾಡುವವರು ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಬೀಜ, ಗೊಬ್ಬರ ಮಾರಾಟ ಮಾಡಿ, ರೈತರನ್ನು ಸುಲಿಗೆ ಮಾಡುತ್ತಾರೆ. ಅಂಥವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ.
ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಕೆ ಮಾಡಬೇಕು. ಯಾವುದೇ ಲಿಂಕ್‌ಗಳನ್ನು ನೀಡದೆ ಎಂಆರ್‌ಪಿ ದರದಲ್ಲಿ ರಸಗೊಬ್ಬರಗಳನ್ನ ಪೂರೈಕೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮುಳಗುಂದ ರೈತಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ ಹೇಳಿದರು.