ಮಡಿಕೇರಿ: ರೆಫ್ರಿಜರೇಟರ್ ಸ್ಫೋಟಗೊಂಡು ಮನೆಯ ವಸ್ತುಗಳಿಗೆ ಹಾನಿಯುಂಟಾಗಿರುವ ಘಟನೆ ನಗರದ ಕಾಲೇಜು ರಸ್ತೆಯಲ್ಲಿ ನಡೆದಿದೆ.
ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿಯಲ್ಲಿರುವ ಉದ್ಯಮಿ ಸುಬ್ರಹ್ಮಣ್ಯ ಹೊಳ್ಳ ಅವರು ಬಾಡಿಗೆಗೆ ನೀಡಿರುವ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಬಾಡಿಗೆದಾರರಾಗಿದ್ದ ಹರೀಶ್ ಕಾರಂತ್ ಎಂಬವರು ೧೪ ದಿನಗಳ ಕಾಲ ರಜೆಯಲ್ಲಿ ತನ್ನೂರಾದ ಕುಂದಾಪುರಕ್ಕೆ ತೆರಳಿದ್ದರು. ಶನಿವಾರ ಹೊಳ್ಳ ಅವರ ಪತ್ನಿ ವೀಣಾ ಹೊಳ್ಳ ಅವರಿಗೆ ಕಮಟು ವಾಸನೆ ಮೂಗಿಗೆ ಬಡಿಯತೊಡಗಿತ್ತು. ಇದೆಂಥಾ ವಾಸನೆ ಎಂದು ಹುಡುಕಾಡಿ, ಕಿಟಕಿ ಮೂಲಕ ಬಾಡಿಗೆ ಮನೆಯೊಳಗೆ ನೋಡಿದಾಗ ಕೋಣೆ ಸಂಪೂರ್ಣ ಕರಕಲಾಗಿರುವುದು ಕಂಡುಬಂತು. ಈ ಬಗ್ಗೆ ಸುಬ್ರಹ್ಮಣ್ಯ ಹೊಳ್ಳ ಅವರು ಬಾಡಿಗೆದಾರರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಅವರು ಮಡಿಕೇರಿಗೆ ಮರಳಿದರು. ಬೀಗ ತೆಗೆದು ನೋಡಿದಾಗ ಮನೆಯ ನಾಲ್ಕೂ ಕೋಣೆಗಳಲ್ಲೂ ಸಂಪೂರ್ಣ ಮಸಿ ಹಿಡಿದಿತ್ತು. ಆದರೆ ಎಲ್ಲಿಯೂ ಬೆಂಕಿ ಹೊತ್ತಿದ್ದ ಕುರುಹೇ ಇರಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಮನೆಯ ಪ್ರಿಡ್ಜ್ ಬಿರುಕು ಬಿಟ್ಟದ್ದು ಕಂಡುಬಂತು. ಸೋಮವಾರ ಬೆಂಗಳೂರಿನಿಂದ ಪ್ರಿಡ್ಜ್ ಕಂಪನಿಯ ತಂತ್ರಜ್ಞರು ಮಡಿಕೇರಿಗೆ ಬಂದು ಪರಿಶೀಲಿಸಿ ಇದು ಪ್ರಿಡ್ಜ್‌ನೊಳಗಿನ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಉಂಟಾದ ಅನಾಹುತವಾಗಿದ್ದು, ವಿರಾಳಾತಿ ವಿರಳವಾಗಿ ಈ ರೀತಿ ಸಂಭವಿಸುತ್ತದೆ ಎಂದು ಹೇಳಿದ್ದಾರೆ.ಮನೆಯ ನಾಲ್ಕೂ ಕೋಣೆಗಳೂ ಮಸಿಯಿಂದಾಗಿ ಕಪ್ಪಗಾಗಿದ್ದು, ನಾಲ್ಕು ತಿಂಗಳ ಹಿಂದೆ ಬಣ್ಣಬಳಿದಿದ್ದ ಗೋಡೆಗಳು ಕಪ್ಪು ಬಣ್ಣದಿಂದ ಕೂಡಿದೆ. ಮನೆಯ ಕೋಣೆಗಳ ಟೈಲ್ಸ್ ಕೂಡ ಅಲ್ಲಲ್ಲಿ ಒಡೆದುಹೋಗಿರುವುದು ಸ್ಫೋಟದ ತೀವ್ರತೆ ತೋರಿಸುತ್ತಿತ್ತು. ಇಡೀ ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದೆ, ಮನೆಯೊಳಗಡೆ ಎಲ್ಲಿಯೂ ಗಾಳಿ ಬಾರದಂತೆ ಕಿಟಕಿಗಳು ಬಂದ್ ಆಗಿದ್ದವು. ಇಷ್ಟೆಲ್ಲಾ ಅನಾಹುತ ಸಂಭವಿಸಿದ್ದರೂ ಸ್ಫೋಟದ ಶಬ್ದ ಮಾತ್ರ ಸುತ್ತಮುತ್ತಲಿನವರಿಗೆ ಕೇಳಿಯೇ ಇಲ್ಲ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭ ರೆಫ್ರಿಜರೇಟರ್ ಸ್ಫೋಟಗೊಂಡಿದ್ದರಿಂದ ಪ್ರಾಣಹಾನಿ ತಪ್ಪಿದೆ.