ಹಾವೇರಿ: ತಾಲೂಕಿನಲ್ಲಿ ಉತ್ತಮ ಶಾಲಾ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಸಮನ್ವಯದಿಂದ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಎಲ್ಲ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ಚಿಂತನೆ ಮಾಡಲಾಗಿದೆ. ಈ ಕುರಿತು ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೂಚನೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನಕ್ಕಿಂತ ಶಾಲೆಗಳಿಗೆ ಆದ್ಯತೆ ನೀಡಬೇಕಾಗಿದೆ. ಹಾಗಾಗಿ ಶಾಲಾ ಕೊಠಡಿ, ಕಂಪೌಂಡ್, ಶೌಚಾಲಯ, ಭೋಜನಾಲಯ ಸೇರಿದಂತೆ ಶಾಲೆಗಳಿಗೆ ಮೂಲಭೂತ ಸೌಲಭ್ಯ ಅವಶ್ಯಕತೆ ಕುರಿತು ಸಂಪೂರ್ಣ ಮಾಹಿತಿ ನೀಡಿದರೆ ಆದ್ಯತೆ ಮೇರೆಗೆ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ , ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಮಕ್ಕಳ ಕಲಿಕೆ ಹಿತದೃಷ್ಟಿಯಿಂದ ಪ್ರಾಥಮಿಕ ಶಾಲೆಗಳಿಗೆ ೧೨೨ ಹಾಗೂ ಪ್ರೌಢಶಾಲೆಗಳಿಗೆ ೨೫ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಬರುವ ಬಡ ರೋಗಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ನಾಯಿಕ ಕಡಿತ ಸೇರಿದಂತೆ ವಿವಿಧ ಲಸಿಕೆಗಳನ್ನು ಸಾಕಷ್ಟು ದಾಸ್ತಾನು ಮಾಡಿಕೊಂಡಿರಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಸಂಭವಿಸದಂತೆ ತೀವ್ರ ನಿಗಾವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಮಂಜೂರಾದ ಹಾಗೂ ಖಾಲಿ ಇರುವ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಮಾಹಿತಿ ನೀಡಿದರೆ ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಗಳ ಭರ್ತಿಗೆ ಕ್ರಮವಹಿಸಲು ಅನುಕೂಲವಾಗುತ್ತದೆ. ಕೂಡಲೇ ಖಾಲಿ ಇರುವ ವೈದ್ಯರ ಹಾಗೂ ಸಿಬ್ಬಂದಿಗಳ ಪಟ್ಟಿ ನೀಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ವಿದ್ಯಾರ್ಥಿ ನಿಲಯಗಳಿಗೆ ತಾಲೂಕು ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡುವ ಮೂಲಕ ವಿದ್ಯಾರ್ಥಿ ನಿಲಯಗಳ ಸ್ವಚ್ಛತೆ, ಆಹಾರ ವಿತರಣೆ ಪರಿಶೀಲಿಸಬೇಕು. ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಬಗೆಹರಿಸಬೇಕು. ಹೊಸ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಜಾಗ ಇದ್ದರೆ ಕೂಡಲೇ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.ಆಯ್ಕೆ ಸಮಿತಿ ಬದಲಾವಣೆ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಕುರಿ ಘಟಕ ಸ್ಥಾಪನೆ ಕುರಿತು ಫಲಾನುಭವಿಗಳ ಆಯ್ಕೆ ಕುರಿತು ಮಾಹಿತಿ ಪಡೆದ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರು, ಆಯ್ಕೆ ಸಮಿತಿಯಲ್ಲಿ ಸ್ಥಳೀಯ ಶಾಸಕರನ್ನು ಕೈಬಿಡಲಾಗಿದೆ. ಈ ಸಮಿತಿ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಿ, ಈ ಕುರಿತು ಪಶು ಸಂಗೋಪನೆ ಸಚಿವರ ಗಮನಕ್ಕೆ ತರಲಾಗುವುದು ಎಂದರು.