ಅಧಿಕಾರಿಗಳ ನಿರ್ಲಕ್ಷ್ಯ: ಆದೇಶವಿದ್ದರೂ ಹೆಸ್ಕಾಂ ನಿರ್ಮಾಣದ ಅನಧಿಕೃತ ತಡೆಗೋಡೆ ತೆರವಿಗೆ ನಕಾರ

KannadaprabhaNewsNetwork |  
Published : Feb 03, 2025, 12:32 AM ISTUpdated : Feb 03, 2025, 01:27 PM IST
ಬನಹಟ್ಟಿಯ ಲಕ್ಷ್ಮೀ ನಗರದಲ್ಲಿರುವ ಅಕ್ರಮ ತಡೆಗೋಡೆ ತೆರವುಗೊಳಿಸಿ ರಸ್ತೆ ನಿರ್ಮಿಸಬೇಕಿರುವ ಪ್ರದೇಶ. | Kannada Prabha

ಸಾರಾಂಶ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂರು ನಾಲ್ಕು ಬಾರಿ ತೆರವಿಗೆ ದಿನಾಂಕ ನಿಗದಿಯಾಗಿದ್ದರೂ ಕಾಣದ ಕೈಗಳ ಕೈವಾಡದಿಂದ ಹಿನ್ನಡೆಗೆ ಕಾರಣವಾಗಿದೆ. ಇದೇ ರೀತಿ ಮುಂದುವರೆದಲ್ಲಿ ಹೋರಾಟ ಅನಿವಾರ್ಯ

ಶಿವಾನಂದ ಪಿ.ಮಹಾಬಲಶೆಟ್ಟಿ

 ರಬಕವಿ-ಬನಹಟ್ಟಿ : ಕಳೆದ ಮೂರುವರೆ ದಶಕಗಳ ಹಿಂದೆ ಅನಧಿಕೃತವಾಗಿ ಹೆಸ್ಕಾಂ ನಿರ್ಮಾಣ ಮಾಡಿರುವ ತಡೆಗೋಡೆ ತೆರವುಗೊಳಿಸಿ, ರಸ್ತೆ ನಿರ್ಮಿಸುವ ಆದೇಶವಿದ್ದರೂ ಇದೀಗ ನಗರಸಭೆ ಹಾಗೂ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತೆರವುಗೊಳಿಸಲು ನಾಟಕೀಯ ಬೆಳವಣಿಗೆ ಮುಂದುವರೆದಿದ್ದು, ಬಡಾವಣೆಯಲ್ಲಿನ ಜನತೆ ನಿತ್ಯ ಹಿಡಿಶಾಪ ಹಾಕುವಂತಾಗಿದೆ.

ಬನಹಟ್ಟಿಯ ಲಕ್ಷ್ಮೀ ನಗರಕ್ಕೆ ತೆರಳುವ ರಸ್ತೆ ಸುಮಾರು ೪೦ ಅಡಿಯಷ್ಟಿದ್ದು, ಈ ಪ್ರದೇಶಕ್ಕೆ ಅನುಗುಣವಾಗಿ ರಸ್ತೆಯ ಮಧ್ಯಭಾಗದಲ್ಲಿನ ಕೇವಲ ಏಳೆಂಟು ಕುಟುಂಬಗಳ ಅಕ್ರಮ ಪ್ರದೇಶವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ರಸ್ತೆ ಆರಂಭದಲ್ಲಿನ ಹೆಸ್ಕಾಂ ಅಕ್ರಮ ತಡೆಗೋಡೆ ಮತ್ತು ಕಾವೇರಿ ಹೋಟೆಲ್‌ ನಂತರದಲ್ಲಿನ ಪ್ರದೇಶವನ್ನೂ ಕಬಳಿಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ಕಾರದ ಸುಪರ್ದಿಗೆ ಪಡೆಯಲಾಗುವುದೆಂದು ತಹಸೀಲ್ದಾರ್‌ ಗಿರೀಶ ಸ್ವಾದಿ ಸ್ಪಷ್ಟಪಡಿಸಿ, ತೆರವು ಕಾರ್ಯಾಚರಣೆಗೆ ಪೊಲೀಸ್ ನೆರವಲ್ಲಿ ಮುಂದುವರೆಯಲು ನಗರಸಭೆಗೆ ಆದೇಶಿಸದ್ದರೂ ನಗರಸಭೆ ಮೂರು, ನಾಲ್ಕು ಬಾರಿ ದಿನಾಂಕ ನಿಗದಿಪಡಿಸಿ ತೆರವು ಕಾರ್ಯ ಮುಂದೂಡಲಾಗುತ್ತಿರುವುದು ಸಂಶಯಕ್ಕೆ ಎಡೆ ಮಾಡಿದೆ.

ಬಹುದೊಡ್ಡ ನಿರ್ಧಾರ:

ಲಕ್ಷ್ಮೀ ನಗರ ಬಡಾವಣೆಯ ಸಂಚಾರ ರಸ್ತೆಯನ್ನು ಸರ್ಕಾರಿ ಕಚೇರಿಗಳು ಸೇರಿದಂತೆ ಕೆಲ ಖಾಸಗಿ ಮಾಲೀಕರೂ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇವೆಲ್ಲದರ ಕುರಿತು ಕಳೆದ ನಾಲ್ಕೈದು ವರ್ಷಗಳಿಂದ ಕಂದಾಯ ಇಲಾಖೆ ಮಟ್ಟದಲ್ಲಿ ಪರಿಶೀಲನೆ ನಡೆದಿದೆ. ಕೊನೆಗೂ ಭೂಮಾಪನಾ ಇಲಾಖೆ, ನಗರಸಭೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಖಾಸಗಿ ಪ್ರದೇಶವನ್ನು ಸರ್ಕಾರದ ವಶಕ್ಕೆ ಪಡೆಯುವಲ್ಲಿ ಎಲ್ಲ ತಯಾರಿ ನಡೆಸಿಕೊಳ್ಳಲಾಗಿದೆ ಎಂದು ತಹಸೀಲ್ದಾರ್‌ ಸ್ವಾದಿ ಸ್ಪಷ್ಟಪಡಿಸಿದ್ದಾರೆ. ಆದರೆ ಅದು ಈವರೆಗೂ ಅನುಷ್ಠಾನಗೊಳ್ಳದಿರಲು ಏನು ಕಾರಣ ಎಂಬುದು ನಿಗೂಢವಾಗೇ ಉಳಿದಿದೆ.

ಹೆಸ್ಕಾಂ ತಡೆಗೋಡೆ ತೆರವು ಸೇರಿದಂತೆ ಮುಂದಿನ ಪ್ರದೇಶಗಳ ತೆರವು ಪೂರ್ಣಗೊಳಿಸದೇ ಕೇವಲ ಮಧ್ಯದ ಎಡಬದಿಯ ಪಿಕೆಪಿಎಸ್ ಕಟ್ಟಡ ಸೇರಿ ಆರು ಖಾಸಗಿ ಜಾಗೆಗಳನ್ನು ೪ ವರ್ಷಗಳ ಹಿಂದೆಯೇ ತೆರವು ಮಾಡಿರುವುದು ರಾಜಕೀಯ ದ್ವೇಷಕ್ಕಾ ಇಲ್ಲವೇ ಆದೇಶದ ಅನುಷ್ಠಾನಕ್ಕಾ? ಎಂಬುದಕ್ಕೆ ನಗರಸಭೆ ಹೊಣೆಗಾರಿಕೆ ನಿಭಾಯಿಸಿ ಉತ್ತರಿಸಬೇಕಿದೆ.

ಯಾರ ಒತ್ತಡಕ್ಕೀಡಾಗಿ ಮಧ್ಯ ಭಾಗದ ಕಟ್ಟಡಗಳ ತೆರವುಗೊಳಿಸಲಾಯಿತು ಮತ್ತು ಸದ್ಯ ಸರ್ವೇ ನಡೆದು ಖಚಿತ ಅಳತೆಯ ನಿಖರತೆ ತಿಳಿದ ಬಳಿಕವೂ ಯಾರ ಮರ್ಜಿ ಕಾಯಲು ನಾಗರಿಕರಿಗೆ ನಗರಸಭೆ ಅಧಿಕಾರಿಗಳು ಅನ್ಯಾಯ ಎಸಗುತ್ತಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಬಡಾವಣೆ ಜನತೆ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂರು ನಾಲ್ಕು ಬಾರಿ ತೆರವಿಗೆ ದಿನಾಂಕ ನಿಗದಿಯಾಗಿದ್ದರೂ ಕಾಣದ ಕೈಗಳ ಕೈವಾಡದಿಂದ ಹಿನ್ನಡೆಗೆ ಕಾರಣವಾಗಿದೆ. ಇದೇ ರೀತಿ ಮುಂದುವರೆದಲ್ಲಿ ಹೋರಾಟ ಅನಿವಾರ್ಯ ಎಂದು ಈರಪ್ಪ ಕುಳ್ಳಿ, ಬನಹಟ್ಟಿ ನಿವಾಸಿ ತಿಳಿಸಿದರು.

PREV