ಸಣ್ಣ ಕಬ್ಬು ಕಟಾವಿಗೆ ನಕಾರ- ರೈತರಿಗೆ ಸಂಕಷ್ಟ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಜಿಲ್ಲೆಯಲ್ಲಿ 9 ಸಕ್ಕರೆ ಕಾರ್ಖಾನೆ ಇವೆ. ಆದರೆ, ಇಲ್ಲಿನ ರೈತರ ಕಬ್ಬು ಸರಿಯಾಗಿ ಕಟಾವು ಆಗುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆದ ಕಬ್ಬು ಮಾತ್ರ ಕಟಾವು ಆಗುತ್ತಿವೆ. ಇದರಿಂದ ರೈತರಿಗೆ ಸಂಕಷ್ಟ ಬಂದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಸ್ತುತ ಬರಗಾಲದಿಂದ ಈಗಾಗಲೇ ಬಳಲಿರುವ ಕಬ್ಬು ಬೆಳೆಗಾರರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಣ್ಣ ಪ್ರಮಾಣದ ಕಬ್ಬು ಕಟಾವಿಗೆ ಕಾರ್ಖಾನೆ ಹಿಂದೇಟು ಹಾಕುತ್ತಿರುವುದು ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲೆಯಲ್ಲಿ ಒಣ ಬೆಸಾಯದ ಜತೆಗೆ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ತೊಗರಿ, ಜೋಳ, ಕಡಲೆ ಜೊತೆಗೆ ಕಬ್ಬು ಬೆಳೆಯಲು ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿ 9 ಸಕ್ಕರೆ ಕಾರ್ಖಾನೆ ಇವೆ. ಆದರೆ, ಇಲ್ಲಿನ ರೈತರ ಕಬ್ಬು ಸರಿಯಾಗಿ ಕಟಾವು ಆಗುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆದ ಕಬ್ಬು ಮಾತ್ರ ಕಟಾವು ಆಗುತ್ತಿವೆ.

ಈ ವರ್ಷ ಮಳೆ ಅಭಾವದಿಂದ ಇರುವ ಅಲ್ಪಸ್ವಲ್ಪ ನೀರಿನಲ್ಲಿ ಕೊಳವೆ ಬಾವಿ, ಬಾವಿ ಹಾಗೂ ಕಾಲುವೆಗಳ ಮೂಲಕ ಕಷ್ಟಪಟ್ಟು ಕಬ್ಬು ಬೆಳೆದಿರುವ ರೈತರಿಗೆ ಕಾರ್ಖಾನೆಯವರು ಹಾಗೂ ಕಟಾವು ಮಾಡುವ ಗ್ಯಾಂಗಿನವರು ಕಬ್ಬು ಎತ್ತರಕ್ಕೆ ಬೆಳೆದಿಲ್ಲ ಎಂದು ಕಾರಣ ಹೇಳಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಸುಮಾರ ಶೇ.50 ರಷ್ಟು ಕಬ್ಬು ಸರಿಯಾದ ಪ್ರಮಾಣದಲ್ಲಿ ಬೆಳೆದಿಲ್ಲ. 4-6 ಫೂಟ್ ಬೆಳೆದಿರುವ ಕಬ್ಬು ಗ್ಯಾಂಗಿನವರು ಕಟಾವು . ಈ ಕಬ್ಬು ಕಟಾವಿನಿಂದ ನಮಗೆ ಸರಿಯಾದ ಸಂಬಳ ಸಿಗುವುದಿಲ್ಲ ಎನ್ನುತ್ತಿದ್ದಾರೆ. ಇತ್ತು ಕಬ್ಬು ಕಟಾವು ಮಾಡುವ ಯಂತ್ರದವರೂ ಇದು ನಮ್ಮ ಯಂತ್ರದಿಂದ ಕಟಾವು ಆಗುವುದಿಲ್ಲ ಎಂದು ಹೇಳಿ ದೂರ ಸರಿಯುತ್ತಿದ್ದಾರೆ. ಕಾರ್ಖಾನೆಯ ವ್ಯವಸ್ಥಾಪಕರು ಕಟಾವು ಮಾಡುವ ಕೂಲಿ ಕಾರ್ವಿುಕರ ಸಮಸ್ಯೆಯ ನೆಪ ಹೇಳುತ್ತಿದ್ದಾರೆ.

ಕಾರ್ಖಾನೆಯವರ ಹಾಗೂ ಕಬ್ಬು ಕಟಾವು ಮಾಡುವವರ ವಿಳಂಬ ಧೋರಣೆಯಿಂದ ಕಬ್ಬು ಒಣಗುತ್ತಿದೆ. ಫಸಲಿನಲ್ಲಿನ ರಸದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಇಂತಿಷ್ಟೇ ಟನ್ ಇಳುವರಿ ಬರಬಹುದೆಂಬ ಲೆಕ್ಕಾಚಾರದಲ್ಲಿದ್ದ ರೈತರ ನಿರೀಕ್ಷೆ ಹುಸಿಯಾಗಿದೆ. ಇದರಿಂದ ಬೆಳೆದ ಫಸಲಿಗೆ ಪ್ರತಿಫಲ ಸಿಗದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವಂತಾಗಿದೆ.

ಪ್ರಸ್ತುತ ಕಟಾವಿಗೆ 20 ಟನ್‌ಗೆ ₹4000, ಡ್ರೈವರ್ ಲಗಾಣಿ ಒಂದು ಟ್ರಾಕ್ಟರ್‌ಗೆ ₹700 ಪಡೆಯುತ್ತಿದ್ದಾರೆ. ಇದಕ್ಕಿಂತ ಹೆಚ್ಚು ಹಣ ನೀಡಿದರೆ ಮಾತ್ರ ನಿಮ್ಮ ಕಬ್ಬು ಕಟಾವು ಮಾಡುತ್ತೇವೆ ಎನ್ನುತ್ತಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸಚಿವ ಡಾ.ಎಂ.ಬಿ ಪಾಟೀಲರು ಮಧ್ಯಸ್ಥಿಕೆ ವಹಿಸಿ ನಮ್ಮ ಸಮಸ್ಯೆ ಬಗೆಹರಿಸಿ ಎಂದು ರೈತರು ಮನವಿ ಮಾಡಿದ್ದಾರೆ.

--------

ಕೋಟ್

ಬರದ ನಡುವೆಯೂ ಕಷ್ಟಪಟ್ಟು ಕಬ್ಬು ಬೆಳೆದಿದ್ದೇವೆ. ಆದರೆ, ಕಾರ್ಖಾನೆಯವರು, ಕಬ್ಬು ಕಟಾವು ಮಾಡುವುವರು ರೈತರಿಗೆ ಮೋಸ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲೇ ಕಬ್ಬು ಬೆಳೆಗಾರರು ಹಾಗೂ ರೈತ ಸಂಘದೊಂದಿಗೆ ಬೃಹತ್ ಹೋರಾಟ ಮಾಡಬೇಕಾಗುವುದು.

- ಸಂಗಮೇಶ ಸಗರ. ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. ವಿಜಯಪುರ

Share this article