ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಉಚಿತ ಬೇಸಿಗೆ ಶಿಬಿರದ ಅಂಗವಾಗಿ ಕೋಟೆ ಬೆಟ್ಟಕ್ಕೆ ಚಾರಣ ಏರ್ಪಡಿಸಲಾಗಿತ್ತು. ಪುಟಾಣಿಗಳಿಂದ ಹಿಡಿದು ಮಕ್ಕಳು, ಪೋಷಕರು ಸೇರಿದಂತೆ 130ಕ್ಕೂ ಅಧಿಕ ಮಂದಿ ಈ ಚಾರಣದಲ್ಲಿ ಪಾಲ್ಗೊಂಡಿದದ್ದರು.
ಬಿರು ಬಿಸಿಲನ್ನೂ ಲೆಕ್ಕಿಸದೆ ಮಕ್ಕಳು ಬೆಟ್ಟವನ್ನೇರಿ ಸಂಭ್ರಮಿಸಿದರು. ಕಾಡಿನಲ್ಲಿ ದೊರಕುವ ಗೊಟ್ಟೆ ಹಣ್ಣು, ಈಚಲು ಹಣ್ಣು, ಜರ‍್ಗುಳಿ, ಚೂರಿ ಹಣ್ಣು ಮುಂತಾದ ಹಣ್ಣುಗಳ ಸವಿಯುಚರುಂಡರಲ್ಲದೆ ವಿವಿಧ ಗಿಡ, ಮರಗಳ ಪರಿಚಯ ಮಾಡಿಕೊಂಡರು. ಶಿಬಿರದ ಮೇಲುಸ್ತುವಾರಿ ವಹಿಸಿಕೊಂಡಿದ್ದ ತರಬೇತುದಾರರು ಮಕ್ಕಳಿಗೆ ಮಾಹಿತಿ ನೀಡಿದರು.ಭಾಗವಹಿಸಿದ್ದ ಎಲ್ಲರಿಗೂ ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಎಸ್.ಟಿ.ವೆಂಕಟೇಶ್, ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಹರೇಂದ್ರ ಮಾರ್ಗದರ್ಶನದಲ್ಲಿ ಮಕ್ಕಳು ಚಾರಣದಲ್ಲಿ ಪಾಲ್ಗೊಂಡಿದ್ದರು.
ಆರೋಹಣ ತಂಡದ ಕೆ.ಕೆ. ಮಹೇಶ್ ಕುಮಾರ್ ಕ್ಷೇತ್ರದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರಲ್ಲದೆ, ತಂಡದವರೊಂದಿಗೆ ಸ್ಥಳದಲ್ಲಿ ಭಜನೆ ಕಾರ್ಯ ನಡೆಸಿಕೊಟ್ಟರು ಎಂದು ಶಿಬಿರದ ಸಂಚಾಲಕ ಬಾಬು ಸೋಮಯ್ಯ ತಿಳಿಸಿದ್ದಾರೆ.