ಬೆಂಗಳೂರು : ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆ ಅಡಿ ಬರುವ ಸ್ಥಿರಾಸ್ತಿಗಳಿಗೆ ಅನ್ವಯಿಸುವಂತೆ ಕಡ್ಡಾಯವಾಗಿ ಇ-ಸ್ವತ್ತು ಅಥವಾ ಇ-ಆಸ್ತಿಯ ಇ-ತಂತ್ರಾಂಶದಿಂದ ಮಾಹಿತಿ ಪಡೆದು ಅದು ‘ಎ’ ಖಾತಾ ಅಥವಾ ‘ಬಿ’ ಖಾತಾ ಯಾವುದೇ ಇದ್ದರೂ ನೋಂದಣಿ ಮಾಡಬೇಕು ಎಂದು ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಇ-ತಂತ್ರಾಂಶದಡಿ ಇ-ಖಾತಾ ಹೊಂದಿರುವ ಬಿ-ಖಾತಾ ಆಸ್ತಿಗಳ ನೋಂದಣಿಗೆ ಕೆಲ ಉಪ ನೋಂದಣಾಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದರು. ಎ-ಖಾತಾ ಆಸ್ತಿ ಆಗಿರಲಿ, ಬಿ-ಖಾತಾ ಆಸ್ತಿ ಆಗಿರಲಿ ಇ-ಆಸ್ತಿ ಅಥವಾ ಇ-ಸ್ವತ್ತಿನ ಇ-ತಂತ್ರಾಂಶದಡಿ ನೋಂದಣಿಯಾಗಿ ಇ-ಖಾತಾ ಪಡೆದಿದ್ದರೆ ನೋಂದಣಿ ಮಾಡಬೇಕು ಎಂಬರ್ಥದಲ್ಲಿ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾ.12ರಂದು ಸುತ್ತೋಲೆ ಹೊರಡಿಸಿರುವ ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತ ದಯಾನಂದ್, ರಾಜ್ಯಾದ್ಯಂತ ಎಲ್ಲಾ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಪಂ ಅಧೀನದಲ್ಲಿರುವ ಸ್ವತ್ತುಗಳಿಗೆ ಕಡ್ಡಾಯವಾಗಿ ಇ-ಆಸ್ತಿ, ಇ-ಸ್ವತ್ತು ಬಳಸಿ ನೋಂದಣಿ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ.
ಹೀಗಿದ್ದರೂ ಕೆಲ ಉಪನೋಂದಣಾಧಿಕಾರಿಗಳು ಇ-ಖಾತಾ ಇದ್ದಾಗ್ಯೂ ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಸೃಷ್ಟಿಸುತ್ತಿರುವುದು ಕೇಂದ್ರ ಕಚೇರಿ ಗಮನಕ್ಕೆ ಬಂದಿದೆ.
ಉಪ ನೋಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಕಡ್ಡಾಯವಾಗಿ ಇ-ತಂತ್ರಾಂಶದಿಂದ ನಿಶ್ಚಿತವಾದ ಇ-ಸ್ವತ್ತು ಹಾಗೂ ಇ-ಆಸ್ತಿಯನ್ನು ಇ-ತಂತ್ರಾಂಶದಿಂದ ಮಾಹಿತಿ ಪಡೆದು ಎ ಖಾತೆ ಅಥವಾ ಬಿ ಖಾತೆ ಯಾವುದೇ ಇದ್ದರೂ ನೋಂದಣಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ನಿರ್ದೇಶನ ಉಲ್ಲಂಘಿಸುವಂತಿಲ್ಲ: ಹಾಗಂತ ಈ ಹಿಂದಿನ ಸರ್ಕಾರದ ಸುತ್ತೋಲೆ ಹಾಗೂ ಪತ್ರಗಳಲ್ಲಿನ ನಿರ್ದೇಶನಗಳನ್ನು ಉಲ್ಲಂಘಿಸಿ ನೋಂದಣಿ ಮಾಡಲು ಅವಕಾಶವಿಲ್ಲ. ಸರ್ಕಾರದ ಸುತ್ತೋಲೆ ಹಾಗೂ ಕೇಂದ್ರ ಕಚೇರಿ ನಿರ್ದೇಶನಗಳನ್ನು ಉಲ್ಲಂಘಿಸಿ ಸ್ಥಿರಾಸ್ತಿಗಳನ್ನು ನೋಂದಣಿ ಮಾಡುವ ಉಪ ನೋಂದಣಾಧಿಕಾರಿಗಳ ವಿರುದ್ಧ ಕೆಸಿಎಸ್‌ಆರ್ ನಿಯಮಗಳಡಿ ಶಿಸ್ತು ಕ್ರಮ ಕೈಗೊಳ್ಳುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.