ಬೆಂಗಳೂರು ನಗರದಲ್ಲಿ ಶವ ಸಂಸ್ಕಾರಕ್ಕೆ ನೋಂದಣಿ, 250 ರು. ಕಡ್ಡಾಯ

KannadaprabhaNewsNetwork |  
Published : Jun 20, 2026, 04:00 AM ISTUpdated : Jun 20, 2026, 05:03 AM IST
Electric Cremation

ಸಾರಾಂಶ

ಇನ್ನು ಮುಂದೆ ಶವಸಂಸ್ಕಾರ ನಡೆಸುವವರು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣವಾದ www.bbmp.gov.in ನಲ್ಲಿ ಮಾತ್ರ ನೋಂದಾಯಿಸಿಕೊಳ್ಳಬೇಕು, ಪ್ರತಿ ಶವಸಂಸ್ಕಾರಕ್ಕೆ 250 ರು.ಶುಲ್ಕ ನಿಗದಿಪಡಿಸಲಾಗಿದೆ.

 ಬೆಂಗಳೂರು :  ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ವಿದ್ಯುತ್‌ ಚಿತಾಗಾರಗಳಿದ್ದು, ಸದರಿ ಚಿತಾಗಾರಗಳಲ್ಲಿ ಶವಸಂಸ್ಕಾರ ನಡೆಸುವ ಬಗ್ಗೆ ಪಾಲಿಕೆ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇನ್ನು ಮುಂದೆ ಶವಸಂಸ್ಕಾರ ನಡೆಸುವವರು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣವಾದ www.bbmp.gov.in ನಲ್ಲಿ ಮಾತ್ರ ನೋಂದಾಯಿಸಿಕೊಳ್ಳಬೇಕು, ಪ್ರತಿ ಶವಸಂಸ್ಕಾರಕ್ಕೆ 250 ರು.ಶುಲ್ಕ ನಿಗದಿಪಡಿಸಲಾಗಿದ್ದು, ಶುಲ್ಕ ಪಾವತಿಸಿ ರಸೀದಿ ಪಡೆಯಬೇಕು. ಚಟ್ಟ, ಮಡಿಕೆ, ಪೂಜಾ ಸಾಮಗ್ರಿ ವ್ಯವಸ್ಥೆಯನ್ನು ಮೃತರ ಕುಟುಂಬದವರು ಮಾಡಿಕೊಳ್ಳಬೇಕು, ಪಾಲಿಕೆಯಿಂದ ಇವುಗಳನ್ನು ಒದಗಿಸುವುದಿಲ್ಲ.

ಶವಸಂಸ್ಕಾರಕ್ಕೆ ಬರುವ ಸಂದರ್ಭ, ಮನವಿ ಪತ್ರ, ಮರಣದ ವರದಿ ನಮೂನೆ-02, ವೈದ್ಯರ ದೃಢೀಕರಣ ಪತ್ರ ನಮೂನೆ-4A, ಶವಸಂಸ್ಕಾರ ದೃಢೀಕರಣ ಪತ್ರ ಅಥವಾ ಮೃತರ ಪಡಿತರ ಚೀಟಿ ಅಥವಾ ಮೃತರ ಆಧಾರ್ ಗುರುತಿನ ಚೀಟಿ ಅಥವಾ ಮೃತರ ಚುನಾವಣಾ ಗುರುತಿನ ಚೀಟಿಅಥವಾ ಟಿ.ಸಿ ಮತ್ತು ಪಾನ್ ಕಾರ್ಡ್, ಇವು ಯಾವುದೂ ಗುರುತಿನ ಚೀಟಿ ಇಲ್ಲದಿದ್ದಲ್ಲಿ ನೋಟರಿ ಪ್ರಮಾಣಪತ್ರ ನೀಡಬೇಕು ಎಂದು ಹೇಳಲಾಗಿದೆ.

ಗಾಯತ್ರಿನಗರದ ಹರಿಶ್ಚಂದ್ರಘಾಟ್ ವಿದ್ಯುತ್ ಚಿತಾಗಾರ, ಪೀಣ್ಯ ಮೊದಲನೇ ಹಂತ ಪೀಣ್ಯ ವಿದ್ಯುತ್ ಚಿತಾಗಾರ, ಎಸ್‌ ಆರ್‌ ಎಸ್ ಸ್ಟಾಪ್‌, ಲಗ್ಗೆರೆ, ಮಾಗಡಿ ರಿಂಗ್ ರೋಡ್,ಪ್ರೇಮನಗರ ಸುಮನಹಳ್ಳಿ ವಿದ್ಯುತ್ ಚಿತಾಗಾರ, ಕೆಂಗೇರಿ ಉಪನಗರ, ಕೋಮಘಟ್ಟ ಮುಖ್ಯ ರಸ್ತೆ, ಬಂಡೆಮಠ ಕೆಂಗೇರಿ ವಿದ್ಯುತ್ ಚಿತಾಗಾರ, ಬನಶಂಕರಿಯ ಯಾರಬ್ ನಗರದ ಬನಶಂಕರಿ ವಿದ್ಯುತ್ ಚಿತಾಗಾರಗಳಲ್ಲಿ ಈ ನಿಯಮ ಜಾರಿಯಲ್ಲಿರುತ್ತದೆ.  

ಮೊಬೈಲ್ ಸಂಖ್ಯೆ 9480688528 ಸಂಪರ್ಕಿಸಬಹುದು

ಹೆಚ್ಚಿನ ಮಾಹಿತಿಗೆ ಇಇ (ವಿದ್ಯುತ್) ನಾಗೇಶ್‌ ಅವರ ಮೊಬೈಲ್ ಸಂಖ್ಯೆ 9480688528 ಸಂಪರ್ಕಿಸಬಹುದು. ಮಣ್ಣಿನಲ್ಲಿ ಹೂಳುವುದು, ಕಟ್ಟಿಗೆಯಿಂದ ಸುಡಲಾಗುವ ಶವಸಂಸ್ಕಾರ ಪದ್ಧತಿಯಲ್ಲಿ ಯಾವುದೇ ದೂರುಗಳು ಬಂದಿಲ್ಲ. ಆದರೆ, ವಿದ್ಯುತ್ ಚಿತಾಗಾರದಲ್ಲಿ ಚಟ್ಟ, ಮಡಿಕೆ, ಪೂಜಾ ಸಾಮಗ್ರಿಗಳಿಗೆ ಹಾಗೂ ಪಾಲಿಕೆಗೆ ಎಂದು ಹೇಳಿ ಕೆಲ ವ್ಯಕ್ತಿಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಕಾರಣದಿಂದಾಗಿ ಎಲ್ಲಾ ವಿದ್ಯುತ್ ಚಿತಾಗಾರದ ಎಂಜಿನಿಯರ್‌ಗಳನ್ನು ಒಳಗೊಂಡು ಸಭೆ ನಡೆಸಿ ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಪಶ್ಚಿಮ ಪಾಲಿಕೆ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಕನ್ನಡಪ್ರಭಕ್ಕೆ ತಿಳಿಸಿದರು. ಇಲ್ಲಿಯವರೆಗೆ ಖಾಸಗಿ ವ್ಯಕ್ತಿಗಳು ವೆಬ್ ಸೈಟ್‌ನಲ್ಲಿ ಬುಕ್ ಮಾಡಿ ಅತಿ ಹೆಚ್ಚಿನ ಮೊತ್ತವನ್ನು ಕುಟುಂಬದವರಿಂದ ವಸೂಲು ಮಾಡುತ್ತಿದ್ದರು. ಈ ಕಾರಣದಿಂದಾಗಿ ಪಾಲಿಕೆಯಿಂದ ಕೇವಲ 250 ಶುಲ್ಕ ಹಾಗೂ ಅಧಿಕೃತ ವೆಬ್ ಸೈಟ್‌ನಲ್ಲಿ ಬುಕ್ ಮಾಡಬೇಕು. ಇದು ನಿಯಮ, ಹಣ ಇರುವವರು ಎಷ್ಟು ಬೇಕಾದರೂ ವೆಚ್ಚ ಮಾಡಿ ಶವಸಂಸ್ಕಾರ ಮಾಡಬಹುದು ಎಂದು ಆಯುಕ್ತರು ತಿಳಿಸಿದರು.

ಒಂದು ವೇಳೆ ಹೂಳುವುದು, ಕಟ್ಟಿಗೆಯಿಂದ ಸುಡುವ ಶವಸಂಸ್ಕಾರ ಪದ್ಧತಿಯಲ್ಲಿ ಈಗ ಸಮಸ್ಯೆಗಳೇನಾದರೂ ಇದ್ದಲ್ಲಿ ಸಾರ್ವಜನಿಕರು ಆಯುಕ್ತರು, ಪಶ್ಚಿಮ ನಗರಪಾಲಿಕೆ ವಿಭಾಗ, 18ನೇ ಕ್ರಾಸ್ ರಸ್ತೆ, ಐಡಿಯಲ್ ಹೋಮ್ಸ್ ಟೌನ್ ಶಿಪ್, ರಾಜ ರಾಜೇಶ್ವರಿ ನಗರ, ಬೆಂಗಳೂರು-560098 ದೂರು ಸಲ್ಲಿಸಬಹುದು.

ಉತ್ತರ ಪಾಲಿಕೆಯಿಂದಲೂ ಮಾರ್ಗಸೂಚಿ

ಬೆಂಗಳೂರು: ಉತ್ತರ ಪಾಲಿಕೆ ವಿಭಾಗದಲ್ಲಿ ಇರುವ ವಿದ್ಯುತ್ ಚಿತಾಗಾರಗಳಲ್ಲಿ ಸ್ಲಾಟ್ ಗಳನ್ನು ಕಾಯ್ದಿರಿಸುವ ಸಂದರ್ಭ ಗೂಗಲ್‌ನಲ್ಲಿ ಕಂಡುಬರುವ ನಕಲಿ ಜಾಲತಾಣಗಳನ್ನು ಸಂಪರ್ಕಿಸದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗಳನ್ನು ಸಂಪರ್ಕಿಸಲು ಉತ್ತರ ಪಾಲಿಕೆ ತಿಳಿಸಿದೆ. ಈ ವ್ಯಾಪ್ತಿಯಲ್ಲಿ ಚಿರಶಾಂತಿಧಾಮ ವಿದ್ಯುತ್ ಚಿತಾಗಾರ, ಹೆಬ್ಬಾಳ ಕೆಂಪಾಪುರ, ಮುಕ್ತಿಧಾಮ ವಿದ್ಯುತ್ ಚಿತಾಗಾರ, ಮೇಡಿ ಅಗ್ರಹಾರ,ಇವುಗಳಲ್ಲಿ ಸ್ಲಾಟ್ ಕಾಯ್ದಿರಿಸಲು ಜಿಬಿಎ ವೆಬ್ ಸೈಟ್ ಗಳಾದ https:apps.bbmp.gov.in/crematorium/forms/onlinebookingfrm.aspx, ಹಾಗೂ https:site.bbmp.gov.in/onlinecrematoriumprocessflow.html ಇವುಗಳನ್ನು ಸಂಪರ್ಕಿಸಲು ಪಾಲಿಕೆ ಮನವಿ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಏಡ್ಸ್ ರೋಗಿ ಎಂದು ಸುಳ್ಳು ಹೇಳಿ ಹಣ ಸುಲಿಗೆ: ಪತ್ನಿ ವಿರುದ್ಧ ಕೇಸ್‌
ಬೆಂಗಳೂರು ನಗರದಲ್ಲಿ 15 ಲಕ್ಷ ಗಿಡ ನೆಡುವ ಅಭಿಯಾನ ಜೂ.27ರಿಂದ ಆರಂಭ