ಸ್ಪರ್ಧಾತ್ಮಕ ವೇದಿಕೆ ಬಳಸಿ ಪ್ರತಿಭೆ ಪ್ರದರ್ಶಿಸಿ

KannadaprabhaNewsNetwork |  
Published : Jun 20, 2026, 03:15 AM IST
ಸಂಕೇಶ್ವರ | Kannada Prabha

ಸಾರಾಂಶ

ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ಕ್ರೀಡೆ, ಕಲೆ, ಸಾಹಿತ್ಯ, ಹಾಗೂ ಸಾಂಸ್ಕೃತಿಕ ರಂಗದಲ್ಲೂ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಮಾಜಿ ಸಚಿವ ಹಾಗೂ ಎಸ್‌ಡಿವಿಎಸ್ ಸಂಘದ ಅಧ್ಯಕ್ಷ ಎ.ಬಿ.ಪಾಟೀಲ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ಕ್ರೀಡೆ, ಕಲೆ, ಸಾಹಿತ್ಯ, ಹಾಗೂ ಸಾಂಸ್ಕೃತಿಕ ರಂಗದಲ್ಲೂ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಮಾಜಿ ಸಚಿವ ಹಾಗೂ ಎಸ್‌ಡಿವಿಎಸ್ ಸಂಘದ ಅಧ್ಯಕ್ಷ ಎ.ಬಿ.ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದ ಎಸ್‌ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ 2026-27ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣದ ನೈಜ ಉದ್ದೇಶ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗಿದೆ. ಹೀಗಾಗಿ ಯುವಜನತೆ ತರಗತಿಗಳಲ್ಲಿ ಬೋಧಕರೊಂದಿಗೆ ಮುಕ್ತ ಸಂವಾದ ನಡೆಸಿ, ಜ್ಞಾನ ವೃದ್ಧಿಸಿಕೊಳ್ಳಬೇಕು. ಜೊತೆಗೆ ವಿವಿಧ ಸ್ಪರ್ಧಾತ್ಮಕ ವೇದಿಕೆಗಳನ್ನು ಬಳಸಿಕೊಂಡು ತಮ್ಮಲ್ಲಿನ ಸುಪ್ತ ಪ್ರತಿಭೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಾಲಚಂದ್ರ ಜಿ.ಹೆಗಡೆ ಮಾತನಾಡಿ, ವಿಜ್ಞಾನ ಎಂಬುವುದು ನಮ್ಮ ನಿತ್ಯ ಜೀವನದ ಪ್ರತಿಯೊಂದು ಹಂತದಲ್ಲೂ ಹಾಸುಹೊಕ್ಕಾಗಿದೆ. ವಿದ್ಯಾರ್ಥಿ ದೆಸೆಯಲ್ಲೇ ಜಿಜ್ಞಾಸೆ, ಪ್ರಶ್ನಿಸುವ ಗುಣ ಹಾಗೂ ಹೊಸ ಅವಿಷ್ಕಾರಗಳ ಕಡೆಗೆ ಕುತೂಹಲ ತಳೆದು, ವೈಜ್ಞಾನಿಕ ದೃಷ್ಟಿಕೋನ ರೂಢಿಸಿಕೊಳ್ಳಬೇಕು ಎಂದರು.ಸಂಸ್ಥೆಯ ಕಾರ್ಯದರ್ಶಿ ಜಿ.ಸಿ.ಕೋಟಗಿ ಮಾತನಾಡಿ, ಜಾಗತಿಕ ಮಟ್ಟದ ಶೈಕ್ಷಣಿಕ ಅನುಭವ ಹೊಂದಿರುವ ಪ್ರೊ.ಹೆಗಡೆ ಮಾರ್ಗದರ್ಶನವು ವಿದ್ಯಾರ್ಥಿಗಳಲ್ಲಿ ಉನ್ನತ ಕನಸುಗಳನ್ನು ಬಿತ್ತಲು ಮತ್ತು ಸಾಧನೆಯ ಹಾದಿಯಲ್ಲಿ ಸಾಗಲು ಉತ್ತಮ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾರಾಣಿ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೇ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಇಂತಹ ಪ್ರತಿಭೆಗಳಿಗೆ ಆಡಳಿತ ಮಂಡಳಿಯು ನೀಡುತ್ತಿರುವ ನಿರಂತರ ಬೆಂಬಲ ಶ್ಲಾಘನೀಯ ಎಂದರು.ವೇದಿಕೆಯಲ್ಲಿ ಎಸ್‌ಡಿವಿಎಸ್ ಸಂಘದ ಉಪಾಧ್ಯಕ್ಷ ಕೆ.ಸಿ.ಶಿರಕೋಳಿ, ಆಡಳಿತಾಧಿಕಾರಿ ಡಾ.ಬಿ.ಎ.ಪೂಜಾರಿ, ಆಡಳಿತ ಮಂಡಳಿ ಸದಸ್ಯರಾದ ಹಿರಿಯ ವಕೀಲ ಆರ್.ಬಿ.ಪಾಟೀಲ, ವಿ.ಬಿ.ತೋಡಕರ್, ಸುಭಾಷ್ ಕಾಸರಕರ ಹಾಗೂ ಪ್ರಾಚಾರ್ಯೆ ಎಸ್.ಯು.ಯರಗಟ್ಟಿ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಶ್ರಾವಣಿ ಶೇಡಗೆ ನಿರೂಪಿಸಿದರು. ಐಶ್ವರ್ಯಾರಾಣಿ ರಿಜಕನವರ ಸ್ವಾಗತಿಸಿದರು. ಶ್ರದ್ಧಾ ಕಬಾಡಗಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಹ ಮತದಾರನ ಹಕ್ಕಿಗೆ ಧಕ್ಕೆಯಾಗದಂತೆ ಜಾಗೃತಿ ವಹಿಸಿ
ತ್ಯಾಜ್ಯ ವಿಲೇವಾರಿ ಘಟಕ ತೆರವುಗೊಳಿಸಿ