ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ತಾಲೂಕಿನ ತುರಮುರಿ ವ್ಯಾಪ್ತಿಯಲ್ಲಿರುವ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದಿಂದ ಗ್ರಾಮಸ್ಥರು ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಇದರಿಂದ ಶಾಶ್ವತ ಪರಿಹಾರ ಒದಗಿಸಲು ಈ ಘಟಕವನ್ನು ಇಲ್ಲಿಂದ ತೆರವುಗೊಳಿಸಿ ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ತುರಮುರಿ ಗ್ರಾಮಸ್ಥರು ಪ್ರತಿಭಟಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ತ್ಯಾಜ್ಯ ಘಟಕದಿಂದ ಹರಡುತ್ತಿರುವ ರೋಗರುಜಿನಗಳಿಂದ ನಾವು ರೋಸಿ ಹೋಗಿದ್ದೇವೆ. ಇದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದ್ದು, ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ತ್ಯಾಜ್ಯ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಈ ಹಿಂದೆ ಜಿಲ್ಲಾಡಳಿತ ಹೇಳಿತ್ತು. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ನೆನಪೋಲೆ ನೀಡುವ ಉದ್ದೇಶದಿಂದ ಈಗ ಮತ್ತೇ ನಾವು ಪ್ರತಿಭಟನೆ ಮಾಡಿ ಜಿಲ್ಲಾಡಳಿತದ ಬಳಿ ಬರಬೇಕಾಗಿದೆ. ಕಳೆದ 20 ವರ್ಷಗಳಿಂದ ಈ ಕಸದ ಘಟಕದಿಂದಾಗಿ ಗ್ರಾಮದಲ್ಲಿ ದುರ್ವಾಸನೆ ಬೀರುತ್ತಿದೆ. ನೀರು ಕೆಡುತ್ತಿದೆ ಎಂದು ಅಳಲು ತೋಡಿಕೊಂಡರು.ಜಿಲ್ಲಾಧಿಕಾರಿ ಕೊಟ್ಟ ಭರವಸೆ ಏನಾಯ್ತು?:

ಈ ಹಿಂದೆ ಏಪ್ರಿಲ್ 10ರಂದು ಮನವಿ ಕೊಟ್ಟಾಗ, ಈ ವಿಷಯವನ್ನು 60 ದಿನಗಳ ಒಳಗಾಗಿ ಬಗೆಹರಿಸುವುದಾಗಿ ಜಿಲ್ಲಾಧಿಕಾರಿಗಳೇ ಭರವಸೆ ನೀಡಿದ್ದರು. ಆದರೆ ಈ ಅವಧಿ ಮುಗಿದ ನಂತರವೂ ಯಾವುದೇ ಕ್ರಮವಾಗಿಲ್ಲ. ಈಗಾಗಲೇ ಶಾಲೆಗಳು ಸಹ ಆರಂಭಗೊಂಡಿವೆ. ಹೀಗಾಗಿ ಶಾಲಾ ಮಕ್ಕಳು ಸೇರಿದಂತೆ ತುರಮುರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 30 ಸಾವಿರಕ್ಕೂ ಹೆಚ್ಚು ಅಧಿಕ ಜನರು ಇದರಿಂದ ತೊಂದರೆ ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ 5 ಮತ್ತು ಎಸ್‌ಡಬ್ಲ್ಯೂಎಂ ನಿಯಮಗಳು, 2016 ಮತ್ತು 2026ರ ಅಡಿಯಲ್ಲಿ, ನಿಯಮಗಳ ಅನುಸರಣೆಯನ್ನು ಜಾರಿಗೊಳಿಸುವುದು ಮತ್ತು ಇಂತಹ ಉಲ್ಲಂಘನೆಗಳನ್ನು ತಡೆಯುವುದು ಜಿಲ್ಲಾಧಿಕಾರಿಗಳ ಶಾಸನಬದ್ಧ ಕರ್ತವ್ಯವಾಗಿದೆ. ಈ ಡಿಪೋ ಕಲುಷಿತ ನೀರು ಮತ್ತು ಅಶುದ್ಧ ಗಾಳಿಯ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಾ ಮುಂದುವರಿದಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಘಟಕವು ಗ್ರಾಮಸ್ಥರ ಪಾಲಿಗೆ ನಿಧಾನಗತಿಯ ವಿಷವಾಗಿ ಪರಿಣಮಿಸಿದೆ. ಪ್ರತಿದಿನ ಆರೋಗ್ಯ, ಗ್ರಾಮದ ಘನತೆ ಮತ್ತು ಪರಿಸರವನ್ನು ನಾಶಪಡಿಸುತ್ತಿದೆ. ಅಧಿಕಾರಿಗಳು ನಮಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ಈ ದೀರ್ಘಕಾಲದ ಯಾತನೆಯಲ್ಲೇ ನಮ್ಮನ್ನು ಇಡುವ ಬದಲಿಗೆ ಒಂದು ನಿರ್ಣಾಯಕ ಕ್ರಮ ಕೈಗೊಳ್ಳಬೇಕು. ಎಲ್ಲ ಕ್ರಮವನ್ನು ಜುಲೈ 1ರೊಳಗೆ ಆಗದೇ ಹೋದಲ್ಲಿ ತುರಮುರಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಸಾಂವಿಧಾನಿಕ ಪ್ರತಿಭಟನೆಯಾಗಿ, ತುರಮುರಿ ಗ್ರಾಮದಲ್ಲಿ ಮುಂದಿನ ತ್ಯಾಜ್ಯ ಸುರಿಯುವುದನ್ನು ಶಾಂತಿಯುತವಾಗಿ ಮತ್ತು ಸಾಮೂಹಿಕವಾಗಿ ತಡೆಯಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ನಾಗರಾಜ ಜಾಧವ, ಬಿ.ಕೆ.ಅಷ್ಟೇಕರ, ಗೋಪಾಲ, ಸುಹಾಸ ಜಾಧವ, ಡಿ.ಎಂ.ಬೆಳಗಾಂವಕರ ಸೇರಿದಂತೆ ತುರಮರಿ, ಉಚಗಾಂವ, ಕೊಣೆವಾಡಿ, ಬಾಚಿ, ಬಸುರ್ತೆ, ಕಲ್ಲೆಹೋಳ, ಸುಳಗಾ, ಗೋಜಗಾ, ಮನ್ನೂರ ಮತ್ತು ಹಿಂಡಗಲಾ ಗ್ರಾಮಸ್ಥರಿದ್ದರು.