ಕನ್ನಡಪ್ರಭ ವಾರ್ತೆ ತುಮಕೂರುಸೆಪ್ಟೆಂಬರ್ 29 ರಂದು ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ನಡೆಯಲಿರುವ ಐತಿಹಾಸಿಕ ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೋಂದಣಿ ಆರಂಭವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೃದ್ರೋಗದ ಕುರಿತು ಅರಿವು ಮೂಡಿಸಲು ನಮ್ಮ ಜೊತೆ ಹೆಜ್ಜೆ ಹಾಕಬೇಕು ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಚರ್ಯ ರಾದ ಡಾ.ಶಾಲಿನಿ ತಿಳಿಸಿದರು.ಸಿದ್ಧಗಂಗಾ ಆಸ್ಪತ್ರೆಯಲ್ಲಿ ಮ್ಯಾರಥಾನ್ ನೊಂದಣಿಗೆ ಚಾಲನೆ ನೀಡಿ ಮಾತನಾಡಿ, ಅಂದು ಬೆಳಗ್ಗೆ 6 ಗಂಟೆಗೆ ಆಸ್ಪತ್ರೆ ಆವರಣದಲ್ಲಿ ವಿವಿಧ ಗಣ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿಯವರು ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗದ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಮಾತನಾಡಿ ಸೆ.29 ಕ್ಕೆ ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು ಇದರ ಭಾಗವಾಗಿ ನಡೆಯಲಿರುವ ಮ್ಯಾರಥಾನ್ ಪುರುಷ-ಮಹಿಳೆಯರ ವಿಭಾಗದಲ್ಲಿ 10ಕಿ.ಮೀ ಹಾಗೂ 5 ಕಿ.ಮಿ. ಹಾಗೂ 50 ವರ್ಷ ಮೇಲ್ಪಟ್ಟವರಿಗೆ 10 ಕಿ.ಮೀ. ಮ್ಯಾರಥಾನ್ ನಡೆಯಲಿದ್ದು 2 ಕಿ.ಮೀ ಮಜಾ ರನ್ ಕೂಡ ಏರ್ಪಡಿಸಲಾಗಿದೆ.ವಿವಿಧ ವಿಭಾಗದ ವಿಜೇತರಿಗೆ ಒಟ್ಟು 1.5 ಲಕ್ಷ ಮೌಲ್ಯದ ಬಹುಮಾನವಿರಲಿದೆ ಎಂದರು.ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ ಮಾತನಾಡಿ 5 ಕಿ.ಮೀ ಮ್ಯಾರಥಾನ್ ಸಿದ್ಧಗಂಗಾ ಆಸ್ಪತ್ರೆಯಿಂದ ಆರಂಭವಾಗಿ ಕೆಇಬಿ ರಸ್ತೆ ಮೂಲಕ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅಂತ್ಯವಾಗಲಿದೆ, 10 ಕೆ ಮ್ಯಾರಥಾನ್ ಆಸ್ಪತ್ರೆಯಿಂದ ಹೊರಟು ಟೌನ್ ಹಾಲ್,ಕಾಲ್ ಟ್ಯಾಕ್ಸ್, ರಿಂಗ್ ರೋಡ್, ಟಿ.ಪಿ.ಕೈಲಾಸಂ ರಸ್ತೆ ಮೂಲಕ ಸಾಗಿ ಪುನಃ ಆಸ್ಪತ್ರೆಯಲ್ಲಿ ಕೊನೆಗೊಳ್ಳಲಿದೆ ಎಂದರು.ಸಿಇಓ ಡಾ.ಸಂಜೀವ ಕುಮಾರ್ ಮಾತನಾಡಿ ಕಳೆದ 4 ವರ್ಷಗಳಿಂದ ನಡೆಯುತ್ತಿರುವ ಮ್ಯಾರಥಾನ್ ಗೆ ಎಲ್ಲಾ ತಯಾರಿ ಪೂರ್ಣಗೊಂಡಿದ್ದು, ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಸ್ಪರ್ಧಿಗಳು ಕೂಡ ಆಗಮಿಸಲಿದ್ದಾರೆ ನೋಂದಣಿಗಾಗಿ 7624981879ಗೆ ಕರೆಮಾಡಬಹುದು ಎಂದರು. ಅಥ್ಲೆಟಿಕ್ ಅಸೋಸಿಯೇಷನ್ ತುಮಕೂರು ಕಾರ್ಯದರ್ಶಿ ಪ್ರಭಾಕರ್, ದೈಹಿಕ ಶಿಕ್ಷಣದ ನಿರ್ದೇಶಕ ಜಯಶಂಕರ್, ಯೋಗೀಶ್, ಗೋಲ್ಡ್ ಜಿಮ್ ಪ್ರತಾಪ್ ಮುಂತಾದವರಿದ್ದರು.