-ರೈತರ ಪಹಣಿಯಲ್ಲಿ ವಕ್ಫ್ ನೋಂದಣಿ, ವಿ.ಹೆಚ್.ಪಿ ಆಕ್ರೋಶ । ಭಾಲ್ಕಿ ಪಟ್ಟಣದಲ್ಲಿ ರೈತರ ಪ್ರತಿಭಟನಾ ರ್‍ಯಾಲಿ
---ಕನ್ನಡಪ್ರಭ ವಾರ್ತೆ ಭಾಲ್ಕಿ
ಪಿತ್ರಾರ್ಜಿತ ಆಸ್ತಿಯ ಮೇಲೆ ಏಕಾಏಕಿ ವಕ್ಫ್ ಮಂಡಳಿ ಹೆಸರು ನೋಂದಣಿಯಾಗಿರುವುದು, ಈ ಭಾಗದ ರೈತರಿಗೆ ನುಂಗಲಾರದ ತುತ್ತಾಗಿದೆ ಎಂದು ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ ಆಕ್ರೋಶ ವ್ಯಕ್ತಪಡಿಸಿದರು.ಮಹಾತ್ಮಾಗಾಂಧಿ ವೃತ್ತದಲ್ಲಿ ಬುಧವಾರ ವಿವಿಧ ರೈತ ಮುಖಂಡರು ಮತ್ತು ವಿ.ಹೆಚ್.ಪಿ, ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಬೃಹತ್ ರಸ್ತೆ ತಡೆ ಚಳುವಳಿಯ ನೇತೃತ್ವ ವಹಿಸಿ ಮಾತನಾಡಿ, ಕೆಲವು ಪಟ್ಟಭದ್ರ ಹಿತಾಶಕ್ತಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ಅವ್ಯಸ್ಥಿತ ಕಾರ್ಯದಿಂದ ಜಿಲ್ಲೆಯ 13 ಸಾವಿರ ಏಕರೆ ಭೂಮಿಯನ್ನು ವಕ್ಫ್ ಆಸ್ತಿಯೆಂದು ನೋಂದಣಿ ಮಾಡಲಾಗಿದೆ.
ಯಾವುದೇ ದಾಖಲಾತಿ ಪರಿವರ್ತನೆ ಮಾಡಲು ದೇಶದ ಕಾನೂನಿನ ಪ್ರಕಾರ ಮಾಲಿಕರಿಗೆ ನೋಟಿಸ್ ನೀಡಿ ಪರಿಶೀಲಿಸಿ ದಾಖಲೆ ತಿದ್ದುಪಡಿ ಮಾಡಬೇಕು. ಆದರೆ, ಕೆಲವು ಅಧಿಕಾರಿಗಳು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಿ, ಜಿಲ್ಲೆಯ ರೈತರ ಆಸ್ತಿಯಲ್ಲಿ ವಕ್ಫಬೋರ್ಡ ಹೆಸರು ಸೇರಿಸಿದ್ದು, ಯಾವ ನ್ಯಾಯ?, ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರಿರುವ ರೈತರಿಗೆ ಯಾವುದೆ ಸೌಲಭ್ಯಗಳು ಸಿಗುವುದಿಲ್ಲ. ಹೀಗಾಗಿ, ಈ ಭಾಗದ ರೈತರು ಕಂಗಾಲಾಗಿದ್ದಾರೆ. ತಕ್ಷಣವೇ ಎಲ್ಲಾ ರೈತರ ಮತ್ತು ಹಿಂದೂ ದೇವಸ್ಥಾನಗಳ, ಮಠಗಳ ಆಸ್ತಿಯ ಮೇಲಿರುವ ವಕ್ಫ್ ಬೋರ್ಡ್ ಹೆಸರು ಅಳಿಸಿ ಹಾಕಬೇಕು ಎಂದು ಒತ್ತಾಯಿಸಿದರು.ವಿಎಚ್‌ಪಿ ತಾಲೂಕು ಅಧ್ಯಕ್ಷ ಸಾಗರ ಮಲಾನಿ, ಹಿಂದೂಪರ ಸಂಘಟನೆಯ ಶಿವು ಲೋಖಂಡೆ, ಜೈರಾಜ ಕೊಳ್ಳಾ, ಬಿಜೆಪಿ ಮಂಡಲ ಅಧ್ಯಕ್ಷ ವೀರಣ್ಣ ಕಾರಬಾರಿ, ಮನ್ಮಥ ಸ್ವಾಮಿ, ರೈತ ಮುಖಂಡರಾದ ನಾಗೇಶ್ ಶೆಟ್ಟೆಪ್ಪ ಲಂಜವಾಡೆ ಅವರು ಸರ್ಕಾರದ ನೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ನಡೆಸಿದ ಮುಖಂಡರು, ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರ ತಹಸೀಲ್ದಾರ್ ಸಲ್ಲಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ವಿಠಲರಾವ ಮೇತ್ರೆ, ಕಾಶಿನಾಥ ಭೂರೆ, ಪ್ರಮುಖರಾದ ಸೂರಜಸಿಂಗ ರಜಪೂತ, ಜಗದೀಶ ಭೂರೆ, ದೀಪಕ ಸಿಂಧೆ, ಪ್ರಭುರಾವ ಧೂಪೆ, ಪುರಸಭೆ ಸದಸ್ಯ ಪಾಂಡುರಂಗ ಕನಸೆ, ಶಿವಾಜಿರಾವ ಮಾನೆ ಸೇರಿದಂತೆ ಹಲವರು ಇದ್ದರು.
-----ಫೋಟೋ: ಭಾಲ್ಕಿ ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿ, ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಮತ್ತು ರೈತ ಮುಖಂಡರು ವಕ್ಫ್ ಆಸ್ತಿ ನೋಂದಣಿ
ವಿರುದ್ಧ ಪ್ರತಿಭಟನೆ ನಡೆಸಿದರು.------
ಚಿತ್ರ 13ಬಿಡಿಆರ್51