ಜಾನುವಾರುಗಳಿಗೆ ನಿಯಮಿತ ಆರೋಗ್ಯ ತಪಾಸಣೆ ಅಗತ್ಯ: ಡಾ.ಈಶ್ವರಪ್ಪ

KannadaprabhaNewsNetwork |  
Published : Sep 23, 2026, 01:30 AM IST
ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಕಾರಹಳ್ಳಿಯಲ್ಲಿ ದೇಸಿ ಜಾನುವಾರು ತಳಿಗಳ ಸಂರಕ್ಷಣೆ ತರಬೇತಿ, ಪಶು ಆರೋಗ್ಯ ತಪಾಸಣಾ ಶಿಬಿರ ನಡೆಯಿತು. | Kannada Prabha

ಸಾರಾಂಶ

ಶಿಬಿರಕ್ಕೆ ಬಂದ 60ಕ್ಕೂ ಅಧಿಕ ರಾಸುಗಳಿಗೆ ಜ್ವರ, ಕೆಮ್ಮು, ಹರ್ನಿಯಾ, ರಕ್ತಪಿಂಜರಿ, ಹೊಟ್ಟೆ ಉಬ್ಬರ, ಥೈಲೇರಿಯಾ, ವಿಷಭಾದೆ, ಅಜೀರ್ಣ, ಪುನಾರವರ್ತಿತ ಸಂತಾನೋತ್ಪತ್ತಿ, ಚರ್ಮದ ಸೋಂಕು, ಗಾಯ, ಕೆಚ್ಚಲು ಬಾವು, ಜಂತು ಹುಳು ಬಾಧೆ ಮತ್ತು ಉಣ್ಣೆ ಹುಳುವಿನ ಬಾಧೆ ಇತ್ಯಾದಿ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್ ಮತ್ತು ಕಾರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ‘ದೇಶಿ ಜಾನುವಾರು ತಳಿಗಳ ಸಂರಕ್ಷಣಾ ತರಬೇತಿ ಕಾರ್ಯಕ್ರಮ ಮತ್ತು ಜಾನುವಾರುಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಮುಖ್ಯಸ್ಥ ಡಾ.ಈಶ್ವರಪ್ಪ, ಜಾನುವಾರು ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಆಗಿಂದಾಗ್ಗೆ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿಸಿ, ಸೂಕ್ತ ಸಮಯಕ್ಕೆ ಲಸಿಕೆಗಳನ್ನು ನೀಡುವುದರಿಂದ ಅವುಗಳಿಗೆ ತಗಲುವ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿಯೇ ನಿಯಂತ್ರಿಸಬೇಕು ಎಂದು ತಿಳಿಸಿದರು.

ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅಹಮದ್ ಉಮರ್ ಪಾಷ, ಮೇವಿನ ತಳಿಗಳ ಸುಧಾರಿತ ಬೇಸಾಯ ಕ್ರಮಗಳು ಹಾಗೂ ಉತ್ಕೃಷ್ಟ ಮೇವಿನ ಬೆಳೆಗಳಾದ ಸಿ-ಓ – 5, ಕುದುರೆ ಮಸಾಲೆ, ಹುರುಳಿ, ಅಲಸಂಧೆ ಮುಂತಾದ ಹಸಿ ಮೇವುಗಳನ್ನು 20 ಕೆ.ಜಿ. ಹಾಗೂ 5 ಕೆ.ಜಿ. ಒಣಹುಲ್ಲು ಅನುಪಾತದಲ್ಲಿ ಪ್ರತಿದಿನ ನೀಡುವುದರಿಂದ ರಾಸುಗಳ ಪೋಷಕಾಂಶ ನಿರ್ವಹಣೆ ಮಾಡಬಹುದೆಂದು ತಿಳಿಸಿ, ಕರುಗಳಲ್ಲಿ ಜಂತು ನಾಶಕ ಔಷಧಿಗಳ ಮಹತ್ವವನ್ನು ವಿವರಿಸಿದರು.

ಶಿಬಿರಕ್ಕೆ ಬಂದ 60ಕ್ಕೂ ಅಧಿಕ ರಾಸುಗಳಿಗೆ ಜ್ವರ, ಕೆಮ್ಮು, ಹರ್ನಿಯಾ, ರಕ್ತಪಿಂಜರಿ, ಹೊಟ್ಟೆ ಉಬ್ಬರ, ಥೈಲೇರಿಯಾ, ವಿಷಭಾದೆ, ಅಜೀರ್ಣ, ಪುನಾರವರ್ತಿತ ಸಂತಾನೋತ್ಪತ್ತಿ, ಚರ್ಮದ ಸೋಂಕು, ಗಾಯ, ಕೆಚ್ಚಲು ಬಾವು, ಜಂತು ಹುಳು ಬಾಧೆ ಮತ್ತು ಉಣ್ಣೆ ಹುಳುವಿನ ಬಾಧೆ ಇತ್ಯಾದಿ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.

ಕರ್ನಾಟಕ ಹಾಲು ಒಕ್ಕೂಟದ ಪಶು ವೈದ್ಯ ಡಾ. ಭರತ್, ರಾಸುಗಳ ವಿವಿಧ ಕಾಯಿಲೆಗಳಿಗೆ ನಾಟಿ ಔಷಧಿ ಬಳಕೆ, ಗರ್ಭಾವಸ್ಥೆ ರಾಸುಗಳ ಆರೈಕೆ, ಪಶು ಆಹಾರ, ವಿವಿಧ ಲಸಿಕೆಗಳ ಬಗ್ಗೆ ತಿಳಿವಳಿಕೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ. ಜಿ.ಕೆ. ನಿಂಗರಾಜು ಮಾತನಾಡಿ, ದೇಶಿ ಜಾನುವಾರು ತಳಿಗಳು ವಿನಾಶದ ಅಂಚಿನಲ್ಲಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕೆಂದು ತಿಳಿಸಿದರು.

ಕೃಷಿ ವಿಸ್ತರಣಾ ವಿಜ್ಞಾನಿ ಡಾ. ವೈ.ಎಂ. ಗೋಪಾಲ್ ಮಾತನಾಡಿ, ರಾಸುಗಳಿಗೆ ಖನಿಜಾಂಶಗಳ ಮಿಶ್ರಣವನ್ನು ನೀಡುವುದರಿಂದ ಕರುಗಳ ಬೆಳವಣಿಗೆಯು ಸುಧಾರಿಸಲಿದ್ದು, ಮೇವಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸುತ್ತದೆಯೆಂದು ತಿಳಿಸಿದರು.

ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷರಾದ ನಾಗರತ್ನಮ್ಮ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ೬ ಸಾವಿರ ತಾಲೂಕುಗಳಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಗುರಿ: ಮಧುಸೂದನ ಸಾಯಿ
ರೈತರ ವಿಶ್ವಾಸ ಗಳಿಸುವಲ್ಲಿ ಕಾರ್ಖಾನೆಗಳು ವಿಫಲ: ಜಿಲ್ಲಾಧಿಕಾರಿ ಡಾ.ಕುಮಾರ