ಕಾರವಾರ: ಜಿಲ್ಲೆಯಲ್ಲಿರುವ ಪ.ಜಾತಿ ಮತ್ತು ಪಂಗಡದವರ ಕುಂದು ಕೊರತೆಗಳ ಬಗ್ಗೆ ಎಲ್ಲ ಉಪ ವಿಭಾಗಮಟ್ಟದಲ್ಲಿ ನಿಯಮಿತವಾಗಿ ನಡೆಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಿರ್ಜಾನದಲ್ಲಿನ ಅಲೆಮಾರಿ ಕುಟುಂಬಗಳಿಗೆ ಸೂಕ್ತ ದಾಖಲೆಗಳಿದ್ದರೂ ವಸತಿ ಸೌಲಭ್ಯ ದೊರೆಯುತ್ತಿಲ್ಲ ಈ ಬಗ್ಗೆ ಗಮನ ಹರಿಸುವಂತೆ ಮತ್ತು ಕುಮಟಾ ಸೇರಿದಂತೆ ದಾಂಡೇಲಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜಾಲಿ ಮತ್ತು ಮಂಕಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಎಸ್.ಸಿ.ಎಸ್.ಟಿ ಸ್ಮಶಾನ ಭೂಮಿ ಇಲ್ಲದ ಬಗ್ಗೆ ಸದಸ್ಯರು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಎಸ್.ಸಿ.ಎಸ್.ಟಿ ಸ್ಮಶಾನಕ್ಕೆ ಭೂಮಿ ಗುರುತಿಸುವ ಕಾರ್ಯವನ್ನು ಆದ್ಯತೆಯಲ್ಲಿ ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ನೀಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ದೌರ್ಜನ್ಯ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಂತ್ರಸ್ಥರಿಗೆ ಕೂಡಲೇ ಅಗತ್ಯ ನೆರವು ಒದಗಿಸುವಂತೆ ಮತ್ತು ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಆದಷ್ಟು ಶೀಘ್ರದಲ್ಲಿ ಇತ್ಯರ್ಥವಾಗುವಂತೆ ಕ್ರಮ ಕೈಗೊಳ್ಳಿ, ಸಿದ್ದಿ ಜನಾಂಗದವರಿಗೆ ಪೂರೈಕೆಯಾಗುವ ಪೌಷ್ಠಿಕ ಆಹಾರದ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ಎಚ್ಚರ ವಹಿಸಿ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿಪಂ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್‌ಮ ವೈ.ಕೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.