ಧಾರವಾಡ:
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಚುನಾವಣಾ ಅಭ್ಯರ್ಥಿಗಳ ಖರ್ಚು-ವೆಚ್ಚದ ಮೇಲೆ ನಿತ್ಯ ತೀವ್ರ ನಿಗಾವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕ ಭೂಷಣ ಪಾಟೀಲ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಖರ್ಚು-ವೆಚ್ಚ ನಿಗಾ ತಂಡದ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಎಂಟು ವಿಧಾನಸಭಾ ಕ್ಷೇತ್ರಗಳ ಸಂಬಂಧಿಸಿದ ಅಧಿಕಾರಿಗಳು ಪ್ರತಿ ದಿನವು ವರದಿ ಸಲ್ಲಿಸುವಂತೆ ತಿಳಿಸಿದರು.
ಅಭ್ಯರ್ಥಿಗಳ ಪ್ರತಿದಿನದ ವಿವಿಧ ಕಾರ್ಯಕ್ರಮ, ಸಮಾರಂಭಗಳ ಚಟುವಟಿಕೆಗಳನ್ನು ಸರಿಯಾಗಿ ದಾಖಲಿಸಿಕೊಳ್ಳುವಂತೆ ಹಾಗೂ ವಿಡಿಯೋ ರೆಕಾರ್ಡಿಂಗ್ ಸಹ ಮಾಡುವಂತೆ ವಿಎಸ್‌ಟಿ, ಎಸ್‌ಎಸ್‌ಟಿ, ವಿವಿಟಿ ತಂಡಗಳಿಗೆ ಹಾಗೂ ಸಹಾಯಕ ವೆಚ್ಚ ಅಧಿಕಾರಿಗಳಿಗೆ ಸೂಚಿಸಿದ ಅವರು, ಖರ್ಚು-ವೆಚ್ಚ ನಿಗಾ ತಂಡವು ಶಾಡೋ ರಜಿಸ್ಟರ್‌ನಲ್ಲಿ ಎಲ್ಲ ಖರ್ಚು-ವೆಚ್ಚ ದಾಖಲಿಸುವಂತೆ ಸೂಚಿಸಿದ ಅವರು, ಅಭ್ಯರ್ಥಿಗೆ ನಿಗದಿಪಡಿಸಿದ ₹ 95 ಲಕ್ಷ ಮೀರಿದಲ್ಲಿ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ ಎಂದರು.ಉಲ್ಲಂಘನೆಗೆ ಕ್ರಮ:
ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣವೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ರೆಕಾರ್ಡ್ ಹಾಗೂ ಸಾಕ್ಷಗಳನ್ನು ಸರಿಯಾಗಿ ದಾಖಲಿಸಬೇಕು. ಖರ್ಚು-ವೆಚ್ಚಗಳ ಬಗ್ಗೆ ದೂರು ಬಂದಾಗ ವೆಚ್ಚ ವೀಕ್ಷಕ ತಂಡವು ತಕ್ಷಣವೇ ಕ್ರಮಕೈಗೊಳ್ಳಬೇಕು. ಚುನಾವಣಾ ಅಭ್ಯರ್ಥಿಯ ಖರ್ಚು-ವೆಚ್ಚ ಮೂರು ಹಂತಗಳಲ್ಲಿ ಪರಿಶೀಲಿಸಬೇಕು ಎಂದರು.ಜಿಲ್ಲೆಯಲ್ಲಿ ಒಟ್ಟು 24 ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿದ್ದು, 57 ಎಫ್‌ಎಸ್‌ಟಿ, 72 ಎಸ್‌ಎಸ್‌ಟಿ ಕಾರ್ಯನಿರ್ವಹಿಸುತ್ತಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಎಂಸಿಸಿ ನೋಡಲ್ ಅಧಿಕಾರಿ ಮೋನಾ ರಾವತ ತಿಳಿಸಿದರು.
ಜಿಲ್ಲೆಯ ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಹಾಗೂ ಬ್ಯಾಂಕ್‌ಗಳ ಪ್ರತಿನಿತ್ಯ ಹಣದ ವ್ಯವಹಾರಗಳ ಮೇಲೂ ನಿಗಾ ವಹಿಸಲಾಗುತ್ತಿದೆ. ₹ 10 ಲಕ್ಷ ಮೇಲ್ಪಟ್ಟ ವ್ಯವಹಾರಗಳನ್ನು ಆದಾಯ ತೆರಿಗೆ ಇಲಾಖೆ ನಿಗಾ ವಹಿಸುತ್ತಿದೆ ಎಂದು ಆದಾಯ ತೆರಿಗೆ ನೂಡಲ್ ಅಧಿಕಾರಿಗಳಾದ ಫಕ್ಕೀರೇಶ ಬಾದಾಮಿ ಮಾಹಿತಿ ನೀಡಿದರು.ಚುನಾವಣಾ ಅವಧಿಯಲ್ಲಿ ಎಲ್ಲ ಬ್ಯಾಂಕ್‌ಗಳ ಮೂಲಕ ನಡೆಯಬಹುದಾದ ಅನುಮಾನ್ಸಾಪದ ವ್ಯವಹಾರ, ಹಣ ಪಡೆಯುವವರ ಹಾಗೂ ಠೇವಣಿ ಇಡುವವರ ಬಗ್ಗೆ ಬ್ಯಾಂಕ್‌ಗಳು ನಿತ್ಯ ಮಾಹಿತಿ ಒದಗಿಸುತ್ತಿವೆ. ₹ 1 ಲಕ್ಷ ಮೇಲ್ಪಟ್ಟ ಖಾತೆ ವ್ಯವಹಾರಗಳ ಮೇಲೂ ಸಹ ಕಣ್ಣು ಇಡಲಾಗಿದೆ ಎಂದು ಲೀಡ್ ಬ್ಯಾಂಕ್ ಅಧಿಕಾರಿ ಪ್ರಭುದೇವ ತಿಳಿಸಿದರು.
ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಹಾಗೂ ವೆಚ್ಚ ನೋಡಲ್ ಅಧಿಕಾರಿ ವಿಶ್ವನಾಥ ಪಿಬಿ ಅವರು ವೆಚ್ಚ ತಂಡಗಳಿಗೆ ಕೈಗೊಂಡ ತರಬೇತಿಗಳ ಬಗ್ಗೆ ವಿವರಿಸಿದರು.ಸಭೆಯ ನಂತರ ಜಿಲ್ಲಾ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದ ಅವರು ಎಸಿಎಂಸಿ, ಸಾಮಾಜಿಕ ಜಾಲತಾಣ, ಸಿ-ವಿಜಿಲ್, ಸುವಿಧಾ, ದೂರ ನಿಯಂತ್ರಣ, ಟಿವಿ ಮಾಧ್ಯಮ ವೀಕ್ಷಣಾ ತಂಡಗಳ ಕಾರ್ಯ ಪರಿಶೀಲಿಸಿದರು.