ದಲಿತ ವಿರೋಧಿ ಬಿಜೆಪಿಗೆ ಮತ ನೀಡದೆ ತಿರಸ್ಕರಿಸಿ

KannadaprabhaNewsNetwork |  
Published : Apr 24, 2024, 02:16 AM IST
ಚಿತ್ರ 23ಬಿಡಿಆರ್52 | Kannada Prabha

ಸಾರಾಂಶ

ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಡಿಜಿ ಸಾಗರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್

ರಾಷ್ಟ್ರಾದ್ಯಂತ ಪ್ರತಿ 6 ನಿಮಿಷಕ್ಕೊಮ್ಮೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ದೌರ್ಜನ್ಯ ತಡೆಯಲು ಬಿಜೆಪಿ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ದುರ್ಬಲಗೊಳಿಸುತ್ತಿರುವ ಬಿಜೆಪಿ ಮತ್ತು ಬ್ರಾಹ್ಮಣ ಶಾಹಿ ಮತ್ತು ಮನುವಾದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಡಿಎಸ್ಎಸ್ ರಾಜ್ಯ ಸಂಚಾಲಕ ಡಿಜಿ ಸಾಗರ ಆರೋಪಿಸಿದರು.

ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಸರ್ಕಾರ ಶೇ.96ರಷ್ಟು ಪ್ರಕರಣ ಬಾಕಿ ಉಳಿಸಿಕೊಂಡು ಗಹಗಹಿಸಿ ನಗುತ್ತಿದೆ. ಹಿಂದೂ ರಾಷ್ಟ್ರದ ಲಕ್ಷಣ ತೋರಿಸುತ್ತಿದೆ. ಆದ್ದರಿಂದ ಇಂಥಹ ದಲಿತ ವಿರೋಧಿ ಬಿಜೆಪಿಗೆ ಮತ ನೀಡದೆ ತಿರಸ್ಕರಿಸಬೇಕೆಂದು ಸಾಗರ ಆಗ್ರಹಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ನಿರುದ್ಯೋಗ ಸಮಸ್ಯೆ ಉಲ್ಭಣಗೊಂಡಿದೆ. ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಹೇಳಿದ್ದರು. ಆದರೆ ಇದ್ದ ಉದ್ಯೋಗ ಕಸಿದಿದ್ದಾರೆ. ಸಂವಿಧಾನ ಮತ್ತು ಮೀಸಲಾತಿಗೆ ಸ್ಫೂರ್ತಿ ನೀಡುತ್ತಿಲ್ಲ. ಕ್ರಮೇಣವಾಗಿ ಸಂವಿಧಾನದ ಆಶಯ ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಸಿಲಿಂಡರ್ ಬೆಲೆ ಸಾವಿರ ದಾಟಿದೆ. ರಾಜ್ಯದ ಪಾಲಿನ ತೆರಿಗೆ ನೀಡಲಿಲ್ಲ. ಶ್ರಮಿಕ ವರ್ಗದವರಿಗೆ ಬೆಲೆ ಇಲ್ಲ. ಒಟ್ಟಿನಲ್ಲಿ ಸಂವಿಧಾನ ವಿರೋಧಿ ನಡೆ ಬಿಜೆಪಿ ಅನುಸರಿಸುತ್ತಿದೆ. ದೇಶ ಪ್ರಭುದ್ಧ ಆಗಬೇಕು. ಜನರ ಜೀವನ ಮಟ್ಟ ಸುಧಾರಣೆಯಾಗಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದ ಅವರು, ದಲಿತ ಸಂಘರ್ಷ ಸಮಿತಿ ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆಗೆ ಗೆಲ್ಲಿಸಿ ಎಂದು ಡಿಜಿ ಸಾಗರ ಮನವಿ ಮಾಡಿದರು.

ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಮಾತನಾಡಿ, ನಾನು ಜೆಡಿಎಸ್‌ನಲ್ಲಿ ಮಾಜಿ ಶಾಸಕ ಬಂಡೆಪ್ಪ ಖಾಶೆಂಪೂರರೊಂದಿಗೆ ಉತ್ತಮ ಒಡನಾಟದಿಂದ ಇದ್ದೇನೆ. ಆದರೆ ಜೆಡಿಎಸ್ ಸದಸ್ಯತ್ವ ಪಡೆದಿಲ್ಲ. ನಮ್ಮ ಧರ್ಮಪತ್ನಿ ಜೆಡಿಎಸ್‌ನಿಂದ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ನನ್ನ ಸಂಪೂರ್ಣ ಬೆಂಬಲ ಕಾಂಗ್ರೆಸ್‌ಗಿದೆ. ಸಂವಿಧಾನದ ಆಶಯ ಉಳಿಯಬೇಕಾದರೆ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತರಬೇಕೆಂದರು.

ಇದೇ ವೇಳೆ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಕೋಮುವಾದಿ ಪಕ್ಷಗಳನ್ನು ಧಿಕ್ಕರಿಸಿ ಜನಪರ ಚಿಂತನೆ ಪಕ್ಷ ಬೆಂಬಲಿಸಿ ಎಂಬ ಮತದಾರರ ಜಾಗೃತಿ ಕರಪತ್ರ ಬಿಡುಗಡೆ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಅರುಣ ಪಟೇಲ್, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಗಾಯಕವಾಡ, ರಾಜು ವಾಘಮಾರೆ, ತಾಲೂಕು ಸಂಚಾಲಕ ರಮೇಶ ಬೆಲ್ದಾರ್, ಝರೆಪ್ಪ ವರ್ಮಾ, ರಾಹುಲ್ ಹಾಲಹಿಪ್ಪರ್ಗಾ, ಶಿವರಾಜ ತಡಪಳ್ಳಿ, ವಾಮನ್ ಮೈಸಲಗಿ, ಸತೀಶ ರತ್ನಾಕರ್ ಸೇರಿ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!