ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಬೆಂಬಲಿಸಿ: ಮಾವಳ್ಳಿ ಶಂಕರ್

KannadaprabhaNewsNetwork | Published : Apr 7, 2024 1:47 AM

ಸಾರಾಂಶ

ರಾಮನಗರ: ಸಂವಿಧಾನಕ್ಕೆ ಎದುರಾಗಿರುವ ಗಂಡಾಂತರ ಮತ್ತು ಪ್ರಜಾಪ್ರಭುತ್ವಕ್ಕೆ ಒದಗಿರುವ ಅಪಾಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.

ರಾಮನಗರ: ಸಂವಿಧಾನಕ್ಕೆ ಎದುರಾಗಿರುವ ಗಂಡಾಂತರ ಮತ್ತು ಪ್ರಜಾಪ್ರಭುತ್ವಕ್ಕೆ ಒದಗಿರುವ ಅಪಾಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನವನ್ನು ತೆಗೆದು ಮನು ಸಂಸ್ಕೃತಿ ಜಾರಿಗೆ ತರುವುದು ಆರ್ ಎಸ್ಎಸ್ ಗುಪ್ತ ಅಜೆಂಡವಾಗಿದ್ದು, ಅದರ ಅಣತಿಯಂತೆಯೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಂವಿಧಾನವನ್ನೇ ಇಲ್ಲವಾಗಿಸುವ ಷಡ್ಯಂತ್ರ ನಡೆಸುತ್ತಿದೆ. ಇದೇ ಉದ್ದೇಶಕ್ಕಾಗಿ ಬಿಜೆಪಿ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲಿಸುವಂತೆ ಕೇಳುತ್ತಿದೆ ಎಂದರು.

ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಬಿಜೆಪಿಗೆ ನಂಬಿಕೆ ಇಲ್ಲದಿರುವ ಕಾರಣ, ಅವುಗಳು ಅಪಾಯದಲ್ಲಿವೆ. ಮೀಸಲಾತಿ ನೀತಿಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ಆರ್ಥಿಕ ಆಧಾರದ ಇಡಬ್ಲ್ಯುಎಸ್ ಮೀಸಲಾತಿ ಜಾರಿಗೆ ತಂದಿದೆ.

ಅಲ್ಲದೆ, ಜನರ ವಿರುದ್ಧ ನಂಬಿಕೆ ಹಾಗೂ ವಿಶ್ವಾಸಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ಸಿಆರ್ ಜಾರಿಗೆ ಮುಂದಾಗಿದ್ದು, ಆಮೂಲಕ ದೇಶದ ನಿವಾಸಿಗಳನ್ನು ಬೆದರಿಸುತ್ತಿದೆ ಎಂದು ಟೀಕಿಸಿದರು.

ಮಹಿಳೆಯರು, ಯುವಕರನ್ನು ಗಮನದಲ್ಲಿಟ್ಟುಕೊಂಡು, ಆರ್ಥಿಕ ಸಬಲೀಕರಣದ ಉದ್ದೇಶದಿಂದಾಗಿ ರಾಜ್ಯ ಸರಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಈ ಗ್ಯಾರೆಂಟಿ ಯೋಜನೆಗಳನ್ನು ಗೇಲಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಗ್ಯಾರೆಂಟಿ ಕೊಡಲು ಮುಂದಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ಮಾಡಿದರೆ ಕರ್ನಾಟಕ ದಿವಾಳಿಯಾಗುತ್ತದೆ ಎಂದೆಲ್ಲಾ ಬಿಜೆಪಿಯವರು ಗೇಲಿ ಮಾಡಿದ್ದರು. ಆದರೆ, ಲೋಕಸಭಾ ಚುನಾವಣೆ ಬರುತ್ತಿದ್ದಂತೆ ಮೋದಿ ಗ್ಯಾರೆಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಮಾವಳ್ಳಿ ಶಂಕರ್ ಟೀಕಿಸಿದರು.

ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಮಾತನಾಡಿ, ಶೋಷಿತ ಸಮುದಾಯಗಳಿಗೆ ಧ್ವನಿಯಾಗಿ ಹಕ್ಕು ನೀಡುತ್ತಿರುವ ಸಂವಿಧಾನವನ್ನು ಬಿಜೆಪಿ ಸಂಸದರು ಹಾಗೂ ಸಚಿವರು ಬದಲಾವಣೆ ಮಾಡುವ ಮಾತುಗಳನ್ನಾಡುತ್ತಿದ್ದಾರೆ. ಆ ಮೂಲಕ ದೇಶದಲ್ಲಿ ಸದ್ದಿಲ್ಲದೆ ಆರ್ ಎಸ್ಎಸ್ ಅಜೆಂಡಾವನ್ನು ಜಾರಿ ಮಾಡುವ ಹುನ್ನಾರ ನಡೆದಿದೆ. ಒಂದೊಮ್ಮೆ ದೇಶದಲ್ಲಿ ಮತ್ತೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ ಡಿಎ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ, ದೇಶದ ಸಂವಿಧಾನವನ್ನು ಬದಲಾಣೆ ಮಾಡಲಿದೆ ಎಂದು ಹೇಳಿದರು.

ಬಿಜೆಪಿ ಈ ಹಿಂದೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತು. ಆದರೆ, ಖಾಲಿ ಇರುವ 60 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳನ್ನು ಮಾಡಿಲ್ಲ. ಒಂದೊಮ್ಮೆ ಹುದ್ದೆ ಭರ್ತಿ ಮಾಡಿದರೆ ಮೀಸಲಾತಿ ನೀಡಬೇಕಾಗುತ್ತದೆ ಎಂಬ ಕಾರಣದಿಂದಾಗಿ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಕೈ ಹಾಕಿಲ್ಲ. ಒಂದೊಮ್ಮೆ ಖಾಲಿ ಹುದ್ದೆ ಭರ್ತಿ ಮಾಡಿದರೆ ಮೀಸಲಾತಿ ನೀಡಬೇಕೆಂಬ ಭಯ ಅವರಲ್ಲಿದೆ. ಹೀಗಾಗಿ ಬಿಜೆಪಿ ಹುನ್ನಾರದ ಬಗ್ಗೆ ಒಕ್ಕೂಟ ಶೋಷಿತ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಸರ್ಕಾರ ಯಾವುದೇ ಇರಲಿ ಹಿಂದುಳಿದ ವರ್ಗದ ಶೋಷಿತ ಸಮುದಾ ಯಕ್ಕೆ ತೊಂದರೆಯಾದಾಗ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಒಕ್ಕೂಟದ ಪ್ರತಿನಿಧಿಗಳು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದು, ಅದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ ಎಂದರು.

ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿ ಎಂದು ಕೇಳುತ್ತಿರುವುದರ ಹಿಂದೆ ದುರುದ್ದೇಶವಿದೆ. ಅದರ ಅನುಷ್ಟಾನಕ್ಕೆ ಸಂಸತ್ತಿನಲ್ಲಿ ಮೂರನೇ ಒಂದು ಭಾಗ ಬೆಂಬಲ ಬೇಕಿರುವುದರಿಂದ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ವೆಂಕಟರಾಮಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಿರ್ದೇಶಕರಾದ ಪರ್ವೇಜ್ ಪಾಷ, ಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ರಂಗಪ್ಪ, ಒಕ್ಕೂಟದ ವೆಂಕಟೇಶ್, ನಾಯ್ಡು, ಆದರ್ಶ ಎಲ್ಲಪ್ಪ, ಸುಬ್ಬಣ್ಣ ಇತರರಿದ್ದರು.

ಕೋಟ್ ...........

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸೋಲಿಸಲು ಬಿಜೆಪಿ ನಾಯಕ ಅಮಿತ್ ಶಾ ಸೇರಿ ಅನೇಕರು ಷಡ್ಯಂತ್ರ ನಡೆಸುತ್ತಿದ್ದಾರೆ. ಹಾಗಾಗಿ ಶೋಷಿತ ಸಮುದಾಯಗಳು ಒಗ್ಗಟ್ಟಾಗಿ ಸುರೇಶ್ ಬೆಂಬಲಕ್ಕೆ ನಿಲ್ಲುವ ತೀರ್ಮಾನ ಮಾಡಿ, ಬಿಜೆಪಿ ಸೋಲಿಸಲು ಪಣ ತೊಡೋಣ.

- ರೈಡ್ ನಾಗರಾಜ್, ಜಿಲ್ಲಾಧ್ಯಕ್ಷರು, ಹಿಂದುಳಿದ ವರ್ಗ ಒಕ್ಕೂಟ, ರಾಮನಗರ6ಕೆಆರ್ ಎಂಎನ್ 12.ಜೆಪಿಜಿ

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article