ಬಡವರ ಬಗ್ಗೆ ಕನಿಕರವಿಲ್ಲದ ಬಿಜೆಪಿ ತಿರಸ್ಕರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork | Published : Apr 20, 2024 1:05 AM

ಸಾರಾಂಶ

ಬಡವರ ಬಗ್ಗೆ ಕನಿಕರವಿಲ್ಲದ ಬಿಜೆಪಿಯನ್ನು ಜನರು ತಿರಸ್ಕರಿಸ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಕಲೇಶಪುರದ ಎಪಿಎಂಸಿ ಯಾರ್ಡ್‌ನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪರ ಚುನಾವಣೆ ಪ್ರಚಾರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಬಡವರ ಬಗ್ಗೆ ಕನಿಕರವಿಲ್ಲದ ಬಿಜೆಪಿಯನ್ನು ಜನರು ತಿರಸ್ಕರಿಸ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಒಂದು ದಶಕದಿಂದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಈ ಹತ್ತು ವರ್ಷಗಳಲ್ಲಿ ರೈತರು, ಕಾರ್ಮಿಕರು, ಹಿಂದುಳಿದವರ ಪರ ಕಾರ್ಯಕ್ರಮ ಮಾಡಿಲ್ಲ. ೧೦ ವರ್ಷಗಳಲ್ಲಿ ನುಡಿದಂತೆ ನಡೆದಿಲ್ಲ. ಆರ್ಥಿಕ, ಸಮಾಜಿಕ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬಬೇಕು ಎಂದು ಸಂವಿಧಾನದಲ್ಲಿ ಸ್ವಷ್ಟವಾಗಿ ಹೇಳಿದೆ. ಗೌಡರಿಗೆ ಮೋದಿ ಬಗ್ಗೆ ಪ್ರೀತಿ ಬಂದಿದ್ದು ಹೇಗೆ? ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಘೋಷಿಸಿದ್ದ ಇವರು ಕೇವಲ ಕುಟುಂಭ ರಾಜಕಾರಣಕ್ಕಾಗಿ ಬಿಜೆಪಿ ಅಲಗಿಸಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ನಿಮ್ಮ ಅಸ್ತಿತ್ವ ಉಳಿವಿಗಾಗಿ ಬಿಜೆಪಿಯವರನ್ನು ಹಾಡಿಹೊಗಳುತ್ತಿದ್ದೀರಲ್ಲ, ನಿಮ್ಮ ಮಣ್ಣಿನ ಮಗನ ಸಿದ್ಧಾಂತ ಎಲ್ಲಿ ಹೋಗಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುವ ಮೂಲಕ ತಪ್ಪುಮಾಡಿದೆ. ಈ ಬಾರಿ ಆ ತಪ್ಪನ್ನು ಸರಿಪಡಿಸುವ ಉದ್ದೇಶದಿಂದ ನಾನು ಇಲ್ಲಿಗೆ ಬಂದಿದ್ದೆನೆ. ಆದ್ದರಿಂದ, ಕಾಂಗ್ರೆಸ್ ಅಭ್ಯರ್ಥಿಯ ಕೈಹಿಡಿಯಬೇಕು’ ಎಂದು ಹೇಳಿದರು.

‘ರಾಜ್ಯದಿಂದ ಕೇಂದ್ರಕ್ಕೆ ನೀಡುವುದು ೪.೫ ಲಕ್ಷ ಕೋಟಿ ರು., ಆದರೆ, ನಮ್ಮ ರಾಜ್ಯದ ಅಭಿವೃದ್ದಿಗೆ ಕೇಂದ್ರ ಸರ್ಕಾರ ನೀಡುತ್ತಿರುವುದು ಕೇವಲ ೫೫ ಸಾವಿರ ಕೋಟಿ ರು., ಕರ್ನಾಟಕ್ಕೆ ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಬಿಜೆಪಿಯ ೨೭ ಸಂಸದರು ತುಟಿ ಬಿಚ್ಚುತ್ತಿಲ್ಲ’ ಎಂದು ಅಣಕವಾಡಿದರು.

‘ನರೇಂದ್ರ ಮೋದಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ. ರಾಜ್ಯದಲ್ಲಿ ಬರ, ನೆರೆ ಬಂದಾಗ ಪ್ರಧಾನಿ ಏಕೆ ಬಂದಿಲ್ಲ. ರಾಜ್ಯದ ಎಲ್ಲಿಯೂ ಮೋದಿ ಅಲೆ ಇಲ್ಲ. ೧೦ ವರ್ಷಗಳಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ ನೀಡಿದ ಉದ್ಯೋಗ ಸೃಷ್ಟಿಸುವ ಭರವಸೆ ಈಡೇರಿಲ್ಲ. ನೀರುದ್ಯೋಗಿಗಳು ಕೆಲಸ ಕೇಳಿದರೆ ಪಕೋಡ ಮಾರುವಂತೆ ಹೇಳುವ ಪ್ರಧಾನಿ ಇವರು. ಬಡವರ ಬಗ್ಗೆ ಇವರಿಗೆ ಕನಿಕರವಿಲ್ಲ’ ಎಂದು ಮೂದಲಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಇಪ್ಪತ್ತೈದು ವರ್ಷಗಳ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ನಿಶ್ಚಿತವಾಗಿದೆ. ಇವರನ್ನು ಗೆಲ್ಲಿಸಿದ್ದಲ್ಲಿ ಜಿಲ್ಲೆಗೆ ಹೊಸಬೆಳಕು ದೊರೆಯುವುದು ನಿಶ್ಚಿತ. ಈಗಾಗಲೇ ನಾವು ಐದು ಗ್ಯಾರಂಟಿ ಚೆಕ್‌ಗಳಿಗೆ ಸಹಿ ಹಾಕಿ ಮನೆಮನೆ ಕಳುಹಿಸಿ ಕೊಡಲಾಗಿದೆ. ನಾವು ೧೦ ಕೆಜಿ ಅಕ್ಕಿ ನೀಡುವ ಭರವಸೆ ಕೇಂದ್ರ ಸರ್ಕಾರದ ಅಸಹಕಾರದಿಂದ ಈಡೇರಲಿಲ್ಲ. ಆದ್ದರಿಂದ ೧೦ ಕೆಜಿ ಅಕ್ಕಿಯ ಹಣವನ್ನು ಖಾತೆಗೆ ಹಾಕುತ್ತಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳು ಅಧಿಕಾರಕ್ಕೆ ಬಂದಂತೆ’ ಎಂದು ಹೇಳಿದರು.

‘ಚುನಾವಣೆ ನಂತರ ಜೆಡಿಎಸ್ ಇರಲ್ಲ. ದೇಶದಲ್ಲಿ ನಿಜವಾದ ಜಾತ್ಯತೀತ ಪಕ್ಷವೆಂದರೆ ಕಾಂಗ್ರೆಸ್. ಮಂಡ್ಯ, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿನ ಜೆಡಿಎಸ್ ಅಭ್ಯರ್ಥಿಗಳು ಯಾರೂ ಗೆಲ್ಲವುದಿಲ್ಲ’ ಎಂದು ತಿಳಿಸಿದರು.

‘ಬಡವರ ಬಗ್ಗೆ ಕನಿಕರವಿಲ್ಲದ ಬಿಜೆಪಿಯನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಆಶೀರ್ವದಿಸಬೇಕು. ನುಡಿದಂತೆ ನಡೆಯುವುದು ಕಾಂಗ್ರೆಸ್ ಪಕ್ಷ. ಆದ್ದರಿಂದ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವಂತೆ ಲೋಕಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಲಿದ್ದೇವೆ. ವಿರೋಧಿಗಳ ನಮ್ಮ ಕಾರ್ಯಕ್ರಮ ನೋಡಿ ಹೊಟ್ಟೆಉರಿದುಕೊಳ್ಳುತ್ತಿದ್ದಾರೆ’ ಎಂದು ಕುಹಕವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ರಾಜ್ಯ ಸಭಾ ಸದಸ್ಯ ಜೆ.ಸಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿಚಂದ್ರು, ಮುರುಳಿಮೋಹನ್, ಕೊಲ್ಲಹಳ್ಳಿ ಸಲೀಂ ಇದ್ದರು.

ಸಕಲೇಶಪುರ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಇತರರಿದ್ದರು.

Share this article