ಉಕ-ಶಿವಮೊಗ್ಗ ಶರಾವತಿ ನದಿಕಣಿವೆ ಉಳಿಸಿ ಹೋರಾಟ ಒಕ್ಕೂಟದ ಜಂಟಿ ನಿಯೋಗದಿಂದ ಮನವಿಕನ್ನಡಪ್ರಭ ವಾರ್ತೆ ಹೊನ್ನಾವರ
ಈ ಸಂದರ್ಭ ಲಿಖಿತ ಮನವಿ ಸಲ್ಲಿಸಿದ ನಿಯೋಗವು, ಪರಿಸರ ಸೂಕ್ಷ್ಮ ಪಶ್ಚಿಮಘಟ್ಟದ ಸಿಂಗಳಿಕ ಅಭಯಾರಣ್ಯದಲ್ಲಿ ಪಂಪ್ಡ್ ಸ್ಟೋರೇಜ್ ಭೂಗತ ವಿದ್ಯುತ್ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಯೋಜನೆಯ ಅನುಷ್ಠಾನದಿಂದ ಪರಿಸರಕ್ಕೆ, ಜೀವ ವೈವಿಧ್ಯತೆಗಳಿಗೆ ಮತ್ತು ಜನಜೀವನದ ಮೇಲೆ ಆಗಬಹುದಾದ ವಿವಿಧ ದುಷ್ಪರಿಣಾಮಗಳ ಕುರಿತು ಅವರು ಕೇಂದ್ರ ಅಧ್ಯಯನ ತಂಡದ ಗಮನ ಸೆಳೆದರು.ನಿಯೋಗದ ನೇತೃತ್ವ ವಹಿಸಿದ್ದ ಶಾಸಕ ದಿನಕರ್ ಕೆ. ಶೆಟ್ಟಿ ಮಾತನಾಡಿ, ಯೋಜನೆಯ ಅನುಷ್ಠಾನದ ವಿರುದ್ಧ ಹಲವು ಕಾನೂನಾತ್ಮಕ ಅಂಶಗಳನ್ನು ಪ್ರಸ್ತುತಪಡಿಸಿದರು. ಯೋಜನೆಯ ಅನುಷ್ಠಾನದಿಂದ ಜೀವ ವೈವಿಧ್ಯಗಳಿಗೆ ಆಗಬಹುದಾದ ಹಾನಿ ಭೂಕುಸಿತ ಸಹಿತ ವಿವಿಧ ಹಾನಿಗಳ ಕುರಿತು ಮತ್ತು ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಪ್ರಸ್ತುತ ಉಂಟಾಗಿರುವ ಕೊರತೆ ಸಹಿತ ಮುಂದೆ ಎದುರಾಗುವ ಅನೇಕ ಸಮಸ್ಯೆಗಳ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಮನಮುಟ್ಟುವಂತೆ ವಿವರಿಸಿದರು.
ಶರಾವತಿ ನದಿಪಾತ್ರದ ಹೊನ್ನಾವರ ತಾಲೂಕಿನ 11ಏತ ನೀರಾವರಿ ಯೋಜನೆಗಳ ಮೂಲಕ ಅಲ್ಲಿನ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರುಣಿಸಲಾಗುತ್ತಿದೆ. ಇಡಗುಂಜಿ, ಮುರ್ಡೇಶ್ವರ ಯಾತ್ರಾ ಸ್ಥಳವೂ ಸೇರಿದಂತೆ ಹೊನ್ನಾವರ ನಗರ ಮತ್ತು ಗ್ರಾಮೀಣ ಭಾಗಗಳ ಲಕ್ಷಾಂತರ ಜನರು ಕುಡಿಯುವ ನೀರಿನ ಅಗತ್ಯ ಸೇವೆಗಳಿಗೆ ಶರಾವತಿ ನದಿಯು ಬಹುಮುಖ್ಯ ಎಂದು ತ್ರಿಸದಸ್ಯರ ಗಮನ ಸೆಳೆದರು.ಕೇಂದ್ರ ವನ್ಯ ಜೀವಿ ಮಂಡಳಿಯ ಡಾ. ಎಚ್.ಎಸ್. ಸಿಂಗ್, ರಮಣ ಸುಕುಮಾರನ್, ಐಜಿಎಫ್ ಶಿವಕುಮಾರ್ ತ್ರಿಸದಸ್ಯರ ಸಮಿತಿಯಲ್ಲಿದ್ದಾರೆ.
ಈ ಸಂದರ್ಭ ಡಿಎಫ್ಒ ಯೋಗೀಶ ಸಿ.ಕೆ., ಶರಾವತಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ್ ಕೊಚರೆಕರ್, ಕಾರ್ಯಾಧ್ಯಕ್ಷ ಮಂಜುನಾಥ್ ನಾಯ್ಕ್, ಗೇರುಸೊಪ್ಪ ಪಂಚಾಯಿತಿ ಅಧ್ಯಕ್ಷೆ ಸುನೀತಾ ಹೆಗಡೆ, ಸದಸ್ಯರಾದ ಮಹೇಶ್ ನಾಯ್ಕ್, ಹೋರಾಟ ಸಮಿತಿ ಸಂಚಾಲಕ ಕೇಶವ್ ನಾಯ್ಕ್ ಬಳಕೂರ್, ವಿಕ್ರಂ ನಾಯ್ಕ್ ಗೋವಿಂದ್ ನಾಯ್ಕ್, ಶ್ರೀಕಲಾ ಶಾಸ್ತ್ರೀ, ಎಂ.ಎಸ್. ಹೆಗಡೆ ಕಣ್ಣಿ, ಊರನಾಗರಿಕರು ಇದ್ದರು.