ಅಮೃತ-2 ಯೋಜನೆಯಡಿ ಕೆರೆಗಳಿಗೆ ಕಾಯಕಲ್ಪ: ಡೀಸಿ ಗುರುದತ್ತ ಹೆಗಡೆ

KannadaprabhaNewsNetwork |  
Published : Jan 01, 2026, 02:45 AM IST
ಪೋಟೋ: 31ಎಸ್‌ಎಂಜಿಕೆಪಿ03ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಶಿವಮೊಗ್ಗ ಮಹಾನಗರಪಾಲಿಕೆ ಮತ್ತು ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿನ ಜಲಮೂಲಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಏರ್ಪಡಿಸಿದ್ದ ವಿಸ್ತೃತ ಯೋಜನಾ ವರದಿಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಗೊಳಪಡುವ ಪುರಲೆ, ನವಿಲೆ, ಗೋಪಶೆಟ್ಟಿಕೊಪ್ಪ ಮತ್ತು ತ್ಯಾವರಚಟ್ನಳ್ಳಿಯ ಕೆರೆಗಳನ್ನು ಕೇಂದ್ರ ಪುರಸ್ಕೃತ ಅಮೃತ- 2.0 ಯೋಜನೆಯಡಿ ಜಲಮೂಲಗಳ ಪುನಶ್ಚೇತನ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಆರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಗರ ಯೋಜನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಗೊಳಪಡುವ ಪುರಲೆ, ನವಿಲೆ, ಗೋಪಶೆಟ್ಟಿಕೊಪ್ಪ ಮತ್ತು ತ್ಯಾವರಚಟ್ನಳ್ಳಿಯ ಕೆರೆಗಳನ್ನು ಕೇಂದ್ರ ಪುರಸ್ಕೃತ ಅಮೃತ- 2.0 ಯೋಜನೆಯಡಿ ಜಲಮೂಲಗಳ ಪುನಶ್ಚೇತನ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಆರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಗರ ಯೋಜನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಶಿವಮೊಗ್ಗ ಮಹಾನಗರಪಾಲಿಕೆ ಮತ್ತು ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿನ ಜಲಮೂಲಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಏರ್ಪಡಿಸಿದ್ದ ವಿಸ್ತೃತ ಯೋಜನಾ ವರದಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಮುಂದಿನ ಎರಡು ದಶಕಗಳ ಅವಧಿಯಲ್ಲಿ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸದರಿ ಪ್ರದೇಶದಲ್ಲಿ ಕೈಗೊಳ್ಳಬಹುದಾದ ಸಂಭಾವ್ಯ ಕಾಮಗಾರಿಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆಯನ್ನು ರೂಪಿಸುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪ್ರತಿ ಕೆರೆಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಕೆರೆಯ ಸುತ್ತಲು ಇರುವ ಒಳಚರಂಡಿ ಜಾಲ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲು ಪಾಲಿಕೆಯ ಅಭಿಯಂತರರಿಗೆ ಸೂಚಿಸಿದರು. ಅಸ್ತಿತ್ವದಲ್ಲಿರುವ ಕೆರೆಗಳ ಏರಿ ಅಭಿವೃದ್ಧಿ ಕೈಗೊಳ್ಳುವ ಸಂದರ್ಭದಲ್ಲಿ ಸಾದ್ಯವಾದಷ್ಟು ಗ್ರಾವೆಲ್/ಮುದ್ರಮ್ ನ್ನು ಉಪಯೋಗಿಸುವಂತೆ ಸೂಚಿಸಿದ ಅವರು, ಸದರಿ 4 ಕಾಮಗಾರಿಗಳ ಡಿಪಿಆರ್‌ನ್ನು ಅನುಮೋದಿಸಿ ಮುಂದಿನ ಕ್ರಮಕ್ಕಾಗಿ ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಲು ಸಭೆಯಲ್ಲಿ ಶಿಫಾರಸ್ಸು ಮಾಡಿ ಆದೇಶಿಸಿದರು.

ಶಿವಮೊಗ್ಗ ಮಹಾನಗರಪಾಲಿಕೆಗೆ 05 ಜಲಮೂಲಗಳ ಪುನಶ್ಚತನಕ್ಕೆ ರು.20.50ಕೋಟಿ ಅನುದಾನವನ್ನು ನಿಗಧಿಪಡಿಸಿ ಈಗಾಗಲೇ ಅನುಮೋದನೆ ನೀಡಿದೆ. PDMCಬೆಂಗಳೂರು ರವರಿಂದ ಪುರಲೆ ಕೆರೆ - 571.00ಲಕ್ಷ, ನವುಲೆ ಕೆರೆ-587.08ಲಕ್ಷ, ತಾವರೇ ಚಟ್ನಹಳ್ಳಿ(ರಾಗಿಗುಡ್ಡ) ಕೆರೆ-581.95 ಲಕ್ಷ ಹಾಗೂ ಗೋಪಿಶೆಟ್ಟಿಕೊಪ್ಪ ಕೆರೆ-608.08ಲಕ್ಷ ರುಗಳನ್ನು ಕೆರೆಗಳ ಅಭಿವೃದ್ಧಿಗೆ ನಿಗದಿಪಡಿಸಲಾಗಿದೆ. ನಗರ ವ್ಯಾಪ್ತಿಯಿಂದ ಹೊರಗುಳಿದ ಕಾರಣ ಹಾಗೂ ಮಂಜೂರಾದ ಮೊತ್ತ ಯೋಜನಾವೆಚ್ಚದಲ್ಲಿ ಭರಿಸಲು ಸಾಧ್ಯವಾಗದಿರುವುದರಿಂದ ಹರಿಗೆ ಕೆರೆಯನ್ನು ಕೈಬಿಟ್ಟಿರುವುದಾಗಿ ತಿಳಿಸಿದ ಅವರು, ಸದರಿ ಕೆರೆಗಳ ಸ್ಥಳಕ್ಕೆ ಅನುಗುಣವಾಗಿ ಕಾಮಗಾರಿಗಳನ್ನು ನಿರ್ವಹಿಸಬೇಕಾದ ಕಾರಣ ಡಿ.ಪಿ.ಆರ್ ಗಳ ಅಂದಾಜು ಮೊತ್ತವು ಅನುಮೋದಿತ ಕ್ರಿಯಾಯೋಜನೆ ಮೊತ್ತಕ್ಕಿಂತ ಹೆಚ್ಚಾಗಿದ್ದು, ಹೆಚ್ಚುವರಿ ಮೊತ್ತವನ್ನು ಮಹಾನಗರಪಾಲಿಕೆ ಅನುದಾನದಡಿ ಭರಿಸಬಹುದಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರ ಸಲಹೆಯನ್ನು ಪರಿಗಣಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿ ಹಾಗೂ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪುರುಷೋತ್ತಮ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕಿ ಆಶಾ ಕುಮಾರಿ, ಮಹಾನಗರಪಾಲಿಕೆಯ ಅಭಿಯಂತರ ತೇಜೂಪ್ರಸಾದ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶಿಲ್ಪಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

--

ಒಳಚರಂಡಿ ಸಂಸ್ಕರಣಾ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲದ ಕಾರಣ ಬಹುತೇಕ ಕೆರೆಗಳಿಗೆ ಕಲುಷಿತ ನೀರು, ತ್ಯಾಜ್ಯ ಬಂದು ಸೇರುತ್ತಿದೆ. ಕೆರೆಯಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಬೆಳೆದು ನಿಂತಿರುವ ಗಿಡ-ಗಂಟೆಗಳನ್ನು ತೆರೆವುಗೊಳಿಸುವುದು, ಹೂಳು ತೆಗೆಯುವುದು, ಕೆರೆಗಳ ಅತಿಕ್ರಮಣ ನಿಯಂತ್ರಿಸಿ, ಅಚ್ಚುಕಟ್ಟು ಪ್ರದೇಶದಲ್ಲಿ ಉದ್ಯಾನವನಗಳ ನಿರ್ಮಾಣ, ಕೆರೆಗಳಲ್ಲಿ ತೇಲುವ ಉದ್ಯಾನವನಗಳ ನಿರ್ಮಾಣ, ಒಟ್ಟಾರೆ ಜಲಮೂಲಗಳನ್ನು ಜೀರ್ಣೋಭಿವೃದ್ಧಿಗೊಳಿಸಿ ನೀರಿನ ಗುಣಮಟ್ಟ ಸುಧಾರಿಸುವ ಸದುದ್ದೇಶ ಹೊಂದಲಾಗಿದೆ.

ಗುರುದತ್ತ ಹೆಗಡೆ ಜಿಲ್ಲಾಧಿಕಾರಿ,ಶಿವಮೊಗ್ಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಗಳಲ್ಲಿ ಕರ ವಸೂಲಾತಿ ಮಾಡಿ
ಪ್ರವಾಸಿಗರು ತುಂಬಿ ತುಳುಕುತ್ತಿದ್ದ ಸಫಾರಿ ಕೇಂದ್ರದಲ್ಲಿ ಮೌನ