ಕನ್ನಡಪ್ರಭ ವಾರ್ತೆ ಹಾಸನ
ಡಿಸೆಂಬರ್ ೨೦೨೩ರಲ್ಲಿ ಭಾರತೀಯ ಬ್ಯಾಂಕರ್ ಗಳ ಸಂಘ (ಐಬಿಎ) ಹಾಗೂ ಬ್ಯಾಂಕ್ ಸಂಘಟನೆಗಳ ನಡುವೆ ನಡೆದ ಒಪ್ಪಂದದಂತೆ ವಾರಕ್ಕೆ ಐದು ದಿನಗಳ ಕೆಲಸ ಜಾರಿಯಾಗಬೇಕಿತ್ತು. ಆದರೆ ಎರಡು ವರ್ಷಗಳು ಕಳೆದರೂ ಕೇಂದ್ರ ಸರ್ಕಾರ ಕಾರ್ಪೊರೇಟ್ ಲಾಭಿಗೆ ಮಣಿದು ಒಪ್ಪಂದ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಸಂಚಾಲಕ ಆರ್. ಕುಮಾರ್, ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕಡಿತದಿಂದ ನೌಕರರು ಮತ್ತು ಅಧಿಕಾರಿಗಳು ತೀವ್ರ ಒತ್ತಡದಲ್ಲಿ ಕೆಲಸ ನಿರ್ವಹಿಸುವಂತಾಗಿದೆ ಎಂದು ಹೇಳಿದರು. ಇದೇ ವೇಳೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಭಾರತೀಯ ಜೀವ ವಿಮಾ ನಿಗಮದಂಥ ಇನ್ಶೂರೆನ್ಸ್ ಕಂಪನಿಗಳಲ್ಲಿ ಈಗಾಗಲೇ ವಾರಕ್ಕೆ ಐದು ದಿನಗಳ ಕೆಲಸ ಜಾರಿಯಲ್ಲಿದೆ ಎಂದು ಅವರು ಗಮನ ಸೆಳೆದರು. ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ವತಿಯಿಂದ ಐಬಿಎ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಎಲ್ಲಾ ಬ್ಯಾಂಕ್ ಸಿಬ್ಬಂದಿಯ ಸಹಿ ಇರುವ ಸಾಮೂಹಿಕ ಮನವಿ ಪತ್ರಗಳನ್ನು ರವಾನಿಸಲಾಗಿದೆ. ಆದರೂ ಸರ್ಕಾರ ಅಥವಾ ವಿತ್ತ ಇಲಾಖೆ ಸ್ಪಷ್ಟ ಪ್ರತಿಕ್ರಿಯೆ ನೀಡದ ಹಿನ್ನೆಲೆ ಈ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಸಹ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಗಳ ನಾಯಕರಾದ ಕಾಂ. ಎ.ಜೆ. ಜಾವಿದ್, ಕಾಂ. ಜಿ.ಟಿ. ಲೋಕೇಶ್, ಕಾಂ. ಚೇತನ್ ಕೊಲಿ ಮಾತನಾಡಿದರು. ಸಂಘಟನೆಯ ಮುಖಂಡರಾದ ಕಾಂ. ಜಯಚಂದ್ರ, ಕಾಂ. ಅಶೋಕ್ ಭಟ್, ಕಾಂ. ಶೀಲಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.