)
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಂಡಳಿಯ 2026-27ನೇ ಸಾಲಿನ ಹೊಸ ದಿನಚರಿ ಬಿಡುಗಡೆ ಕಾರ್ಯಕ್ರಮದಲ್ಲಿ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯು ಪ್ರಸ್ತುತ 10 ಜಿಲ್ಲೆಗಳನ್ನು, 54 ತಾಲೂಕುಗಳ 64 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. 09 ಲೋಕಸಭಾ ಸದಸ್ಯರು, 46 ವಿಧಾನಸಭಾ ಸದಸ್ಯರು, 18 ವಿಧಾನ ಪರಿಷತ್ ಸದಸ್ಯರು, ತಲಾ 10 ಜಿ.ಪಂ ಅಧ್ಯಕ್ಷರು ಮತ್ತು ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು, 1 ಕಾರ್ಯದರ್ಶಿ ಮತ್ತು 10 ಜಿಲ್ಲಾಧಿಕಾರಿಗಳು ಸೇರಿದಂತೆ 104 ಸದಸ್ಯರನ್ನು ಒಳಗೊಂಡಿದೆ ಎಂದರು.
2025-26ನೇ ಸಾಲಿಗೆ ಮಂಡಳಿಗೆ 33 ಕೋಟಿ ರು. ಅನುದಾನ ಬಂದಿದ್ದು, ಕಳೆದ ಬಾರಿಗಿಂತ 7 ರಿಂದ 8 ಕೋಟಿ ಹೆಚ್ಚು ಅನುದಾನ ಬಂದಿದೆ. ಈ ಅನುದಾನವನ್ನು ಪಿಡಬ್ಲ್ಯೂಡಿ, ಜಿಲ್ಲಾ ಪಂಚಾಯಿತಿ ಕಾಮಗಾರಿಗಳನ್ನು ಹೊರತುಪಡಿಸಿ ವಿಶೇಷವಾಗಿ ಮಲೆನಾಡು ಭಾಗಕ್ಕೆ ಅಗತ್ಯವಿರುವ ರಸ್ತೆ, ಕಾಲುಸಂಕ, ಚೆಕ್‌ಡ್ಯಾಂಗಳಿಗೆ ಬಳಕೆ ಮಾಡಲಾಗುತ್ತಿದೆ. ಈಗಾಗಲೇ 100 ಕಾಲುಸಂಕ ಕಾಮಗಾರಿ ಮುಗಿದಿದ್ದು ನಬಾರ್ಡ್ ವಿಶೇಷ ಅನುದಾನದಲ್ಲಿ 350 ರಿಂದ 400 ಕಾಲುಸಂಕ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಲಾಗಿದೆ ಎಂದು ಹೇಳಿದರು.33 ಕೋಟಿ ರು. ಅನುದಾನದಲ್ಲಿ ಶಾಸಕರುಗಳಿಗೆ ಹಾಗೂ ರಚನಾತ್ಮಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಹಂಚಿಕೆಯಾಗಿದ್ದು ತೀರ್ಥಹಳ್ಳಿಯ ಕುಡುಮಲ್ಲಿಗೆಯ ಶತಮಾನೋತ್ಸವ ಶಾಲೆ ಅಭಿವೃದ್ಧಿಗೆ 2.5 ಕೋಟಿ ರು., ಸಾಗರ ಕ್ಷೇತ್ರಕ್ಕೆ 75 ಲಕ್ಷ, ತರೀಕೆರೆಗೆ 1 ಕೋಟಿ ರು. ತೀರ್ಥಹಳ್ಳಿಗೆ ಹೆಚ್ಚುವರಿ 1 ಕೋಟಿ ರು.ಸೇರಿದಂತೆ ವಿವಿಧ ರಚನಾತ್ಮಕ ಕಾಮಗಾರಿ, ಕೆಲಸಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.
ಹೆಚ್ಚುವರಿ ಅನುದಾನಕ್ಕೆ ಬೇಡಿಕೆ: 2026-27ನೇ ಸಾಲಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಮಂಜೂರು ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮಂಡಳಿಗೆ 78.43 ಕೋಟಿ ರು. ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ನಬಾರ್ಡ್ ನೆರವು: ನಬಾರ್ಡ್ ಸಂಸ್ಥೆಯಿಂದ ಆರ್ಥಿಕ ನೆರವು ಪಡೆದು ರಚನಾತ್ಮಕ ಕಾರ್ಯಕ್ರಮಗಳಡಿ ತೂಗು ಸೇತುವೆ, ಕಾಲುಸಂಕ ಮತ್ತು ಬೃಹತ್ ಸೇತುವೆ ಕಾಮಗಾರಿಗಳನ್ನು ಮಂಡಳಿಯಿಂದ ಅನುಷ್ಠಾನಗೊಳಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 10 ಕೋಟಿ ರುನಂತೆ ಕಾಮಗಾರಿ ಪ್ರಸ್ತಾವನೆ ಪಡೆದು ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಮಂಡಳಿ ಸಾಧನೆ: 1993-94ನೇ ಸಾಲಿನಿಂದ 2024-25ರವರೆಗೆ ತೂಗು ಸೇತುವೆ, ಕಾಲು ಸೇತುವೆ, ಕಾಂಕ್ರಿಟ್ ಮತ್ತು ಡಾಂಬರು ರಸ್ತೆ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ಕುಡಿಯುವ ನೀರು ಸರಬರಾಜು ಯೋಜನೆ, ಸಣ್ಣ ನೀರಾವರಿ ಯೋಜನೆ, ಸಾರ್ವಜನಿಕ ಸಮುದಾಯ ಭವನ, ಬಸ್ ನಿಲ್ದಾಣ, ಇತರೆ ಕಟ್ಟಡಗಳನು ಸೇರಿದಂತೆ ಒಟ್ಟು 64,638.71 ಲಕ್ಷದ 20,568 ಅಭಿವೃದ್ಧಿ ಕಾಮಗಾರಿಗಳನ್ನು ಮಲೆನಾಡಿನ ಎಲ್ಲಾ ಭಾಗಗಳಲ್ಲೂ ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಲಾಗಿದೆ ಎಂದರು.ಸಭೆಯಲ್ಲಿ ಎಂಎಡಿಬಿ ಅಧೀನ ಕಾರ್ಯದರ್ಶಿ ಹನುಮನಾಯ್ಕ್, ಉಪನಿರ್ದೇಶಕ ಶಿವಾನಂದ್, ಅಕ್ಷತಾ ಹಾಜರಿದ್ದರು.