ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಗದಾಳ ಗ್ರಾಮದ ಚಂದ್ರವ್ವ ತಂದೆ ಮಲ್ಲಪ್ಪ ನೀಲಜಗಿ (80) ಕೊಲೆಯಾದ ಮಹಿಳೆ. ಸಂಬಂಧಿಗಳಾದ ಪರಪ್ಪ ನೀಲಜಗಿ, ಸದಾಶಿವ ನೀಲಜಗಿ, ಶಂಕರೆಪ್ಪ ನೀಲಜಗಿ, ಸಿದ್ದಪ್ಪ ನೀಲಜಗಿ ಬಂಧಿತರು. ಮಲ್ಲಪ್ಪ ನೀಲಜಗಿ ಹಾಗೂ ಶೋಭಾ ಪರಪ್ಪ ನೀಲಜಗಿ ತಲೆಮರೆಸಿಕೊಂಡವರು.
ಪ್ರಕರಣ ಹಿನ್ನೆಲೆ: ಕೊಲೆಯಾದ ಚಂದ್ರವ್ವಾ ಮೂಲತಃ ಜಗದಾಳ ಗ್ರಾಮದವರು. ತೇರದಾಳದಲ್ಲಿ ಒಬ್ಬಂಟಿ ಜೀವನ ನಡೆಸುತ್ತಿದ್ದರು. ತವರು ಮನೆಯ ಆಸ್ತಿ ವ್ಯಾಜ್ಯ 30 ವರ್ಷಗಳಿಂದ ನ್ಯಾಯಾಲಯದಲ್ಲಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ 10 ಎಕರೆ ಭೂಮಿಯನ್ನು ಚಂದ್ರವ್ವಗೆ ಬಿಟ್ಟುಕೊಡುವಂತೆ ಈಚೆಗೆ ಆದೇಶ ಮಾಡಿತ್ತು. ಹೀಗಾಗಿ ಚಂದ್ರವ್ವ ಕಾರೊಂದನ್ನು ಬಾಡಿಗೆ ಮಾಡಿಕೊಂಡು ಮೋಜನಿ ಅಧಿಕಾರಿಗಳೊಂದಿಗೆ ಪರಿಚಯಸ್ಥನನ್ನು ಕರೆದುಕೊಂಡು ಮಂಗಳವಾರ ಜಗದಾಳದ ಜಮೀನು ಅಳತೆಗೆ ಮಾಡಲು ಬಂದಿದ್ದಾಳೆ. 10 ಎಕರೆ ಜಮೀನು ಕೈಬಿಟ್ಟು ಹೋಗಿದ್ದರಿಂದ ಅಸಮಾಧಾನಗೊಂಡಿದ್ದ ಸಂಬಂಧಿಗಳು ಅಜ್ಜಿಯ ಕೊಲೆಗೆ ಸ್ಕೆಚ್ ಹಾಕಿದ್ದರು. ಅಳತೆಗೆಂದು ಜಮೀನಿಗೆ ಬಂದ ಚಂದ್ರವ್ವಳನ್ನು ಯಾರಿಗೂ ಸಂಶಯ ಬಾರದಂತೆ ಆರೋಪಿಗಳು ಕಾಳಜಿಯಿಂದಲೇ ಮಾತನಾಡಿಸಿ ಸಹಕಾರ ನೀಡಿದ್ದಾರೆ. ಈ ವೇಳೆ ಮೊದಲೇ ಪ್ಲಾನ್ ಮಾಡಿಕೊಂಡಂತೆ ಜಮೀನಿನ ಸಮೀಪದಲ್ಲಿದ್ದ ಕೆನಾಲ್ ಕಡೆಗೆ ಚಂದ್ರವ್ವಳನ್ನು ಕರೆದುಕೊಂಡು ಹೋಗಿ ಕೆನಾಲ್‌ಗೆ ನೂಕಿದ್ದಾರೆ. ಸ್ವಲ್ಪ ದೂರು ತೇಲಿ ಹೋದ ಬಳಿಕ ರಕ್ಷಣೆ ಮಾಡಿದಂತೆ ನಾಟಕವಾಡಿ ನೀರಿನಿಂದ ಮೇಲೆತ್ತಿ ರಬಕವಿ-ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆರೋಪಿಗಳು ನೀವು ನಿಮ್ಮೂರಿಗೆ ಹೋಗಿ ನಾವು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಎಂದು ಹೇಳಿ ಕಳುಹಿಸಿದ್ದು, ಜ.13 ರಾತ್ರಿ ಕಾರಿನಲ್ಲಿ ಹಾಕಿಕೊಂಡು ಹೋಗುವಾಗ ಗುರ್ಲಾಪುರ ಸಮೀಪ ಬರುತ್ತಿದ್ದಂತೆಯೇ ಅಜ್ಜಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.ದಾನಿಯಾಗಿದ್ದ ಚಂದ್ರವ್ವ: ತೇರದಾಳದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಚಂದ್ರವ್ವ ಕೂಡಿಟ್ಟ ಹಣದಲ್ಲಿ 2020ರ ಮಾರ್ಚ್‌ನಲ್ಲಿ ₹22 ಲಕ್ಷ ಮೌಲ್ಯದ 22 ಕೆಜಿ ಬೆಳ್ಳಿ ಕೊಟ್ಟು ಪಟ್ಟಣದ ಆರಾಧ್ಯದೈವ ಅಲ್ಲಮಪ್ರಭು ದೇವಸ್ಥಾನ ದ್ವಾರ ಬಾಗಿಲಿಗೆ ಬೆಳ್ಳಿಯ ಕವಚ ಮಾಡಿಸಿ ಸಮರ್ಪಣೆ ಮಾಡಿದ್ದರು. ಅಲ್ಲದೆ, ತನ್ನ ಪಾಲಿಗೆ ಬಂದ ತವರು ಮನೆಯ 10 ಎಕರೆ ಜಮೀನನ್ನು ಅಲ್ಲಮಪ್ರಭು ದೇವಸ್ಥಾನದ ಅನ್ನದಾಸೋಹ ಸೇರಿದಂತೆ ಇತರೆ ಕಡೆ ದಾನವನ್ನಾಗಿ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.