ಎಂಬಿಬಿಎಸ್ ಮೊದಲ ವರ್ಷದ 4 ಪ್ರಯತ್ನದ ಮಿತಿ ಸಡಿಲಿಕೆ ಕೊಡಿ

KannadaprabhaNewsNetwork |  
Published : Feb 14, 2026, 01:30 AM IST
13ಕೆಡಿವಿಜಿ1-ನವದೆಹಲಿಯಲ್ಲಿ ಶುಕ್ರವಾರ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ ನಡ್ಡಾ ಅವರಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಅರ್ಪಿಸಿದರು. | Kannada Prabha

ಸಾರಾಂಶ

ಎಂಬಿಬಿಎಸ್ ಮೊದಲ ವೃತ್ತಿಪರ ವರ್ಷದ ಪರೀಕ್ಷೆಗೆ ಮತ್ತೊಂದು ಪ್ರಯತ್ನ, ಮರುಮೌಲ್ಯಮಾಪನ (ರೀ ವ್ಯಾಲ್ಯುವೇಷನ್)ಕ್ಕೆ ಅವಕಾಶ ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ ನಡ್ಡಾ ಅವರಿಗೆ ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.

- ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿಯಮ 7.7 ಮರುಪರಿಶೀಲಿಸಿ: ಜೆ.ಪಿ.ನಡ್ಡಾಗೆ ಡಾ.ಪ್ರಭಾ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಎಂಬಿಬಿಎಸ್ ಮೊದಲ ವೃತ್ತಿಪರ ವರ್ಷದ ಪರೀಕ್ಷೆಗೆ ಮತ್ತೊಂದು ಪ್ರಯತ್ನ, ಮರುಮೌಲ್ಯಮಾಪನ (ರೀ ವ್ಯಾಲ್ಯುವೇಷನ್)ಕ್ಕೆ ಅವಕಾಶ ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ ನಡ್ಡಾ ಅವರಿಗೆ ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಒತ್ತಾಯಿಸಿದರು.

ನವದೆಹಲಿಯಲ್ಲಿ ಶುಕ್ರವಾರ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಅವರು ಮನವಿ ಅರ್ಪಿಸಿದರು.

ವೈದ್ಯಕೀಯ ಶಿಕ್ಷಣದ ಮೊದಲ ವೃತ್ತಿಪರ ವರ್ಷದ ಪರೀಕ್ಷೆಗೆ ನಿಗದಿಪಡಿಸಿರುವ ಗರಿಷ್ಠ 4 ಪ್ರಯತ್ನಗಳ ಮಿತಿಯಿಂದಾಗಿ ಕರ್ನಾಟಕದಲ್ಲಿ 275ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಪದವಿ ವೈದ್ಯಕೀಯ ಶಿಕ್ಷಣ ನಿಯಮಾವಳಿ (ಜಿಎಂಇಆರ್-2019)ಯ ನಿಯಮ 7.7 ಪ್ರಕಾರ ಎಂಬಿಬಿಎಸ್ ಮೊದಲ ವರ್ಷದ ಪರೀಕ್ಷೆ ಉತ್ತೀರ್ಣಕ್ಕೆ ವಿದ್ಯಾರ್ಥಿಗಳಿಗೆ ನಾಲ್ಕು ಪ್ರಯತ್ನಗಳಿಗೆ ಮಾತ್ರ ಅವಕಾಶವಿದೆ. ಅದನ್ನು ಮೀರಿದರೆ ವೈದ್ಯಕೀಯ ವಿದ್ಯಾಭ್ಯಾಸ ಮುಂದುವರಿಸಲು ಅನರ್ಹತೆ ವಿಧಿಸಲಾಗುತ್ತದೆ ಎಂದು ಹೇಳಿದರು.

ಇಂತಹ ನಿಯಮದಿಂದಾಗಿ ವಿಶೇಷವಾಗಿ ಕೋವಿಡ್–19 ಮಹಾಮಾರಿ ಸಮಯದಲ್ಲಿ ಶೈಕ್ಷಣಿಕ ವ್ಯತ್ಯಯಗಳನ್ನು ಎದುರಿಸಿದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತಿದೆ. ಕೋವಿಡ್ ಅವಧಿಯಲ್ಲಿ ಆನ್‌ಲೈನ್ ತರಗತಿಗಳ ಅಸಮರ್ಪಕತೆ ಮತ್ತು ಪರೀಕ್ಷೆಗಳ ಅನಿಶ್ಚಿತತೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಸರಿಯಾಗಿ ಅಧ್ಯಯನ ಮಾಡಲಾಗದೇ ವಿಫಲರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ 4 ಪ್ರಯತ್ನಗಳ ಬಳಿಕ ಅವರನ್ನು ಶಾಶ್ವತವಾಗಿ ಅನರ್ಹಗೊಳಿಸುವುದು ಮಾನವೀಯತೆಗೆ ವಿರೋಧವಾಗಿದೆ ಎಂದು ಡಾ.ಪ್ರಭಾ ತಿಳಿಸಿದರು.

ಅನೇಕ ವಿದ್ಯಾರ್ಥಿಗಳು ಇದೇ ವಿಚಾರವಾಗಿ ನ್ಯಾಯಾಲಯದ ಮೊರೆಹೋಗಿದ್ದು, ಕರ್ನಾಟಕ ಹೈಕೋರ್ಟ್ ಮರು ಮೌಲ್ಯಮಾಪನ ನಡೆಸುವಂತೆ ಆದೇಶ ನೀಡಿದೆ. ಆದರೆ, ವಿಶ್ವವಿದ್ಯಾಲಯವು ಮರುಮೌಲ್ಯಮಾಪನ ನಿರಾಕರಿಸುತ್ತಿದೆ. ಹಾಗಾಗಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಮುಖ್ಯಸ್ಥರು ಸಹ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ)ಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆ ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ‌ನಿಯಮ 7.7 ಅನ್ನು ಮರುಪರಿಶೀಲಿಸಿ, ಮತ್ತೊಂದು ಅವಕಾಶ ಅಥವಾ ಮರುಮೌಲ್ಯಮಾಪನಕ್ಕೆ ಅನುವು ಮಾಡಿಕೊಡಬೇಕು ಎಂದು ಕೇಂದ್ರ ಸಚಿವರಿಗೆ ಡಾ.ಪ್ರಭಾ ಮನವಿ ಸಲ್ಲಿಸಿ, ಆಗ್ರಹಿಸಿದರು.

- - -

(ಬಾಕ್ಸ್) * ಚಾಡ್‌ನಲ್ಲಿ ಹಕ್ಕಿಪಿಕ್ಕಿಗಳಿಗೆ ವೀಸಾ ಸಮಸ್ಯೆ: ಸರ್ಕಾರ ಸ್ಪಂದನೆ ಆಫ್ರಿಕಾ ಖಂಡದ ಚಾಡ್ ದೇಶದಲ್ಲಿ ವೀಸಾ ತೊಂದರೆಯಿಂದ ಸಿಲುಕಿರುವ ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ 8 ಜನ ಹಕ್ಕಿಪಿಕ್ಕಿ ಜನಾಂಗದವರಿಗೆ ವೀಸಾ ಸಮಸ್ಯೆಯಾಗಿದ್ದು, ಜೈಲು ಪಾಲಾಗುವ ಆತಂಕದಲ್ಲಿದ್ದರು. ಈ ಎಂಟೂ ಜನರ ವೀಸಾ ನವೀಕರಣಕ್ಕಾಗಿ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಗಿದೆ. ಈಗಾಗಲೇ ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರಿ ಕಚೇರಿಗೆ ಪತ್ರ ಬರೆಯಲಾಗಿದೆ. ಅದಕ್ಕೆ ಸಚಿವಾಲಯದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

- - -

-13ಕೆಡಿವಿಜಿ1.ಜೆಪಿಜಿ: ನವದೆಹಲಿಯಲ್ಲಿ ಶುಕ್ರವಾರ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ ನಡ್ಡಾ ಅವರಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಅರ್ಪಿಸಿ, ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು, ಮೊದಲ ವರ್ಷದ 4 ಪ್ರಯತ್ನಗಳ ಮಿತಿ ಸಡಿಲಿಕೆ ನೀಡುವಂತೆ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಸ್ಪತ್ರೆಯಲ್ಲಿ ಮಿಡ್ ವೈಫರಿ ಲೆಡ್ ಕೇರ್ ಯುನಿಟ್‌ಗೆ ಚಾಲನೆ
ನಗರೋತ್ಥಾನ ಕಾಮಗಾರಿ ಪೂರ್ಣಗೊಳಿಸಲು ನಿರ್ದಿಷ್ಟ ಕಾಲಮಿತಿ