ಬೆಂಬಲ ಬೆಲೆಯ ಕಾಳು ಖರೀದಿಗೆ ನಿಯಮ ಸಡಿಲಿಸಿ

KannadaprabhaNewsNetwork |  
Published : Nov 26, 2025, 02:15 AM IST
25ಡಿಡಬ್ಲೂಡಿ3,4ಬೆಂಬಲ ಬೆಲೆ ಯೋಜನೆ ಅಡಿ ಖರೀದಿಗೆ ಇರುವ ತಾಂತ್ರಿಕ ನಿಯಮಗಳನ್ನು ಸಡಿಲಿಸಿ ರೈತರ ಕಾಳುಗಳನ್ನು ಖರೀದಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಉದ್ದು, ಹೆಸರು ತರುವ ಮೂಲಕ ಪ್ರತಿಭಟಿಸಲಾಯಿತು.  | Kannada Prabha

ಸಾರಾಂಶ

ಧಾರವಾಡ ಗ್ರಾಮೀಣದ ವಿವಿಧ ಗ್ರಾಮಗಳಿಂದ ಉದ್ದು, ಹೆಸರು, ಗೋವಿನ ಜೋಳ ಸೇರಿದಂತೆ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಧಾನ್ಯಗಳನ್ನು ಟ್ರಾಕ್ಟರ್‌ಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಂದು ಸಾಣಿಗೆಯಲ್ಲಿ ಕಾಳುಗಳನ್ನು ಸಾಣಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಧಾರವಾಡ:

ಬೆಂಬಲ ಬೆಲೆ ಯೋಜನೆ ಅಡಿ ವಿವಿಧ ಬೆಳೆಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಅತಿಯಾದ ತಾಂತ್ರಿಕ ನಿಯಮಗಳಿಂದ ರೈತರಿಗೆ ನಷ್ಟವಾಗುತ್ತಿದ್ದು, ಕೂಡಲೇ ತಾಂತ್ರಿಕ ನಿಯಮ ಸಡಿಲಗೊಳಿಸಲು ಆಗ್ರಹಿಸಿ ಧಾರವಾಡ ಗ್ರಾಮೀಣ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಧಾರವಾಡ ಗ್ರಾಮೀಣದ ವಿವಿಧ ಗ್ರಾಮಗಳಿಂದ ಉದ್ದು, ಹೆಸರು, ಗೋವಿನ ಜೋಳ ಸೇರಿದಂತೆ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಧಾನ್ಯಗಳನ್ನು ಟ್ರಾಕ್ಟರ್‌ಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಂದು ಸಾಣಿಗೆಯಲ್ಲಿ ಕಾಳುಗಳನ್ನು ಸಾಣಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಉದ್ದು, ಹೆಸರು ಸೇರಿದಂತೆ ಅನೇಕ ಧಾನ್ಯಗಳ ಖರೀದಿಗೆ ನೋಂದಣಿ, ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಅದು ರೈತರಿಗೆ ಅನುಕೂಲವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಮಳೆಯಿಂದಾಗಿ ಬೆಳೆ ಹಾನಿಗೊಳಗಾಗಿ, ಗುಣಮಟ್ಟ ಕುಸಿದಿರುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ತೀವ್ರ ಪರದಾಟ ನಡೆಸುತ್ತಿದ್ದಾರೆ. ದಲ್ಲಾಳಿಗಳಿಗೆ ಮಾರಬೇಕೆಂದರೆ ಕಡಿಮೆ ದರ ನೀಡುತ್ತಿದ್ದು, ಬೆಂಬಲ ಬೆಲೆಯಲ್ಲಿ ಎಫ್‌ಕ್ಯೂ ಗುಣಮಟ್ಟದ ತೊಂದರೆ ರೈತರು ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಶಾಸಕರಾದ ಅಮೃತ ದೇಸಾಯಿ ಹಾಗೂ ಸೀಮಾ ಮಸೂತಿ ರೈತರ ಸಂಕಷ್ಟ ಹೇಳಿಕೊಂಡರು.

ಇಲ್ಲಿಯ ಹಳೆ ಎಪಿಎಂಸಿ ಮಾರುಕಟ್ಟೆಯ ಒಕ್ಕಲುತನ ಹುಟ್ಟುವಳಿ ಕೇಂದ್ರದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆಯಲಾಗಿದೆ. ನಗರದ ಹಳೆ ಎಪಿಎಂಸಿ ಮಾರುಕಟ್ಟೆಯಲ್ಲಿನ ಒಕ್ಕಲುತನ ಹುಟ್ಟುವಳಿ ಕೇಂದ್ರದಲ್ಲಿ ರೈತರಿಂದ ಖರೀದಿಸಿದ ಧಾನ್ಯಗಳನ್ನು ಉಗ್ರಾಣಕ್ಕೆ ಒಯ್ದಾಗ, ಅಲ್ಲಿನ ಅಧಿಕಾರಿಗಳು ತೇವಾಂಶ, ಗುಣಮಟ್ಟ, ಸ್ವಚ್ಛತೆ ಸೇರಿದಂತೆ ಅನೇಕ ನಿಯಮಗಳನ್ನು ಹೇರುತ್ತಿದ್ದು, ವಿವಿಧ ಧಾನ್ಯಗಳನ್ನು ಮರಳಿ ಕಳುಹಿಸುತ್ತಿದ್ದಾರೆ. ಆದ್ದರಿಂದ ರೈತರ ಕಷ್ಟಗಳನ್ನು ಅರಿತು ಕೂಡಲೇ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಗಂಗಾಧರ ಪಾಟೀಲ ಕುಲಕರ್ಣಿ, ಜಿ.ಆರ್. ಜವಳಗಿ, ಮಡಿವಾಳಪ್ಪ ಸಿಂದೋಗಿ, ನಿಂಗಪ್ಪ ದಿವಟಗಿ, ಮಂಜುನಾಥ ಹಿರೇಮಠ ಸೇರಿದಂತೆ ರೈತರು ಇದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ