ದರೋಜಿ–ಗಂಗಾವತಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ

KannadaprabhaNewsNetwork |  
Published : Oct 17, 2026, 02:30 AM IST
ಕಂಪ್ಲಿ ಮೂಲಕ ದರೋಜಿ–ಗಂಗಾವತಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಹಾಗೂ ತುಂಗಭದ್ರಾ ನದಿಗೆ ನೂತನ ಸೇತುವೆ ಕಾಮಗಾರಿ ಶೀಘ್ರ ಆರಂಭಿಸುವಂತೆ ಆಗ್ರಹಿಸಿ ಬಿಜೆಪಿ ಎಸ್‌ಸಿ ಮೋರ್ಚಾ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರೈಲ್ವೆ ಮಾರ್ಗ ನಿರ್ಮಾಣಗೊಂಡರೆ ಬಳ್ಳಾರಿ–ಹೈದರಾಬಾದ್ ಭಾಗಗಳಿಗೆ ಸರಕು ಸಾಗಣೆ ಸುಗಮವಾಗಲಿದೆ

ಕಂಪ್ಲಿ: ಕಂಪ್ಲಿ ಮೂಲಕ ಹಾದು ಹೋಗುವ ದರೋಜಿ–ಗಂಗಾವತಿ ಬ್ರಾಡ್‌ಗೇಜ್ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕೂಡಲೇ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಒತ್ತಾಯಿಸಿದರು.

ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಹಾಗೂ ಕಂಪ್ಲಿ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸುವಂತೆ ಆಗ್ರಹಿಸಿ, ಬಿಜೆಪಿ ಮುಖಂಡರು ಬುಧವಾರ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಮಂಡಲ ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಕಂಪ್ಲಿ ಮೂಲಕ ಗಂಗಾವತಿ–ದರೋಜಿ ಬ್ರಾಡ್‌ಗೇಜ್ ರೈಲ್ವೆ ಮಾರ್ಗ ನಿರ್ಮಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯು ಕಾರ್ಯ ಸಾಧ್ಯತಾ ವರದಿ ಪರಿಶೀಲಿಸಿದ್ದು, ಯೋಜನೆಗೆ ₹705.45 ಕೋಟಿ ವೆಚ್ಚ ನಿಗದಿಪಡಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಳಂಬ ಮಾಡದೆ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಈ ರೈಲ್ವೆ ಮಾರ್ಗ ನಿರ್ಮಾಣಗೊಂಡರೆ ಬಳ್ಳಾರಿ–ಹೈದರಾಬಾದ್ ಭಾಗಗಳಿಗೆ ಸರಕು ಸಾಗಣೆ ಸುಗಮವಾಗಲಿದೆ. ಅಲ್ಲದೆ ಹುಬ್ಬಳ್ಳಿ, ಗದಗ, ಗಂಗಾವತಿ ಹಾಗೂ ಸಿಂಧನೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ರೈಲ್ವೆ ಮಾರ್ಗ ನಿರ್ಮಾಣದಿಂದ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜತೆಗೆ ಪ್ರಾದೇಶಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಆದ್ದರಿಂದ ಯೋಜನೆಗೆ ಶೀಘ್ರ ಚಾಲನೆ ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ನೂತನ ಸೇತುವೆ ಕಾಮಗಾರಿ ಆರಂಭಿಸಿ

ಕಂಪ್ಲಿ ಪಟ್ಟಣದ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಶೀಘ್ರ ಟೆಂಡರ್ ಕರೆದು ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಸೇತುವೆ ನಿರ್ಮಾಣದಿಂದ ಕಂಪ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರ ಸಂಚಾರಕ್ಕೆ ಅನುಕೂಲವಾಗಲಿದ್ದು, ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ. ಈ ಹಿನ್ನೆಲೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸರ್ಕಾರಗಳು ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ಅಗಳಿ ಪಂಪಾಪತಿ, ರಾಜಶೇಖರ, ಸಿ.ಎಂ.ಬಸವರಾಜ, ಕೆ.ರಂಗಪ್ಪ, ಎಂ.ವಿರುಪಾಕ್ಷಿ, ವೈ.ಮುರುಳಿಮೋಹನರೆಡ್ಡಿ, ಟಿ.ರಾಜಶೇಖರ, ಬಿ.ರಮೇಶ, ವಿ. ಲಿಂಗರಾಜ, ಬಿ.ನಾಗರಾಜ, ಆಕಾಶ್, ಬಾರಿಕರ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ಪುತ್ತೂರುದ ಪಿಲಿಗೊಬ್ಬು'''' ಸೀಸನ್ ೪
ವಿಶೇಷ ಚೇತನರಿಗೆ ಮೆಡಿಕಲ್ ಕಾಲೇಜ್‌ನಲ್ಲಿ ಉದ್ಯೋಗ ಒದಗಿಸಲು ಯತ್ನ-ಶಾಸಕ ಅಶೋಕ್ ರೈ