ನಿಗಮ ಮಂಡಳಿಗಳಿಗೆ ಅನುದಾನ ಬಿಡುಗಡೆ ಮಾಡಿ

KannadaprabhaNewsNetwork | Published : Dec 14, 2024 12:46 AM

ಸಾರಾಂಶ

ವಿವಿಧ ನಿಗಮಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಒಬಿಸಿ ಮೋರ್ಚಾ ಕಾರ್ಯಕರ್ತರು ಬೆಳಗಾವಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿವಿಧ ನಿಗಮಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಒಬಿಸಿ ಮೋರ್ಚಾ ಕಾರ್ಯಕರ್ತರು ಬೆಳಗಾವಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಹಿಂದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದಿರುವ ತಾವು ಹಿಂದುಳಿದ ವರ್ಗಗಳ ಜನರ ಆರ್ಥಿಕ, ಔದ್ಯೋಗಿಕ, ಕೃಷಿ ಮತ್ತು ಶಿಕ್ಷಣಕ್ಕಾಗಿ ನಿಗಮಗಳಿಗೆ ಹಣ ಬಿಡುಗಡೆ ಮಾಡದೇ ಇರುವುದು ಅತ್ಯಂತ ನೋವಿನ ಸಂಗತಿ ಎಂದರು.ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ₹ 1000 ಕೋಟಿಗೂ ಹೆಚ್ಚು ಅನುದಾನವನ್ನು ದಿ.ದೇವರಾಜ ಅರಸು, ಒಕ್ಕಲಿಗ, ಮರಾಠ, ವಿಶ್ವಕರ್ಮ, ವೀರಶೈವ ಲಿಂಗಾಯತ, ನಿಜಶರಣ ಅಂಬಿಗರ ಚೌಡಯ್ಯ, ಸವಿತಾ ಸಮಾಜ, ಆಲೆಮಾರಿ ಅರೆ ಅಲೆಮಾರಿ, ಮಡಿವಾಳ ಮಾಚಿ ದೇವ, ಮತ್ತು ಕಾಡುಗೊಲ್ಲ ಅಭಿವೃದ್ಧಿ ನಿಗಮಗಳಿಗೆ ಹಣ ಬಿಡುಗಡೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ₹1600 ಕೋಟಿ ಬಜೆಟ್‌ನಲ್ಲಿ ಘೋಷಣೆ ಮಾಡಿ ಕೇವಲ ₹57.04 ಕೋಟಿ ಮಾತ್ರ ವೆಚ್ಚ ಮಾಡಿ ಮೋಸ ಮಾಡಿರುವುದು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಲಕ್ಕಾಗಿ ₹ 6065 ಅರ್ಜಿಗಳು ಸಲ್ಲಿಕೆಯಾದರೂ ಒಂದು ಪೈಸೆ ಹಣವು ಕೂಡ ಬಿಡುಗಡೆ ಮಾಡದೇ ಹಿಂದುಳಿದ ವರ್ಗಗಳ ಮಕ್ಕಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲೆಮರೆ ಕಾಯಿಯಂತೆ ಇರುವ ಅತ್ಯಂತ ಹಿಂದುಳಿದ ಸಮುದಾಯಗಳಾದ ಹೂಗಾರ, ಕಂಬಾರ, ಕುಂಬಾರ, ಗಾಣಿಗ, ಹಡಪದ, ಈಡಿಗ ಮತ್ತು ಮಾಳಿ ಸಮುದಾಯಗಳು ಕೂಡ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ಬರಬೇಕೆಂದು ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಬಿಜೆಪಿ ಸರ್ಕಾರ ಸ್ಥಾಪಿಸಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಇಂತಹ ಸಣ್ಣಸಣ್ಣ ಹಿಂದುಳಿದ ಸಮುದಾಯಗಳ ನಿಗಮಗಳಿಗೆ ಒಂದು ಪೈಸೆ ಹಣ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಮಾದಮ್ಮನವರ, ಸಂದೀಪ್ ದೇಶಪಾಂಡೆ, ಧನಶ್ರೀ ದೇಸಾಯಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಸಂತೋಷ ಹಡಪದ,ರೇಖಾ ಚಿನ್ನಾಕಟ್ಟಿ, ಸಚಿನ್ ಕಡಿ, ಯಲ್ಲೇಶ್ ಕೊಲಕಾರ, ಸಂತೋಷ ದೇಶನೂರ, ಸುಭಾಷ್ ಸಣ್ಣವೀರಪ್ಪನವರ, ಯುವರಾಜ ಜಾಧವ, ಧನಂಜಯ ಜಾಧವ, ಮನೋಜ್ ಪಾಟೀಲ್, ಪ್ರಶಾಂತ್ ಅಮ್ಮಿನಭಾವಿ, ವೀರಭದ್ರ ಪೂಜಾರಿ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Share this article