ಕಾರವಾರ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023- 24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಮ್ಮ ಬೆಳೆಗಳಿಗೆ ವಿಮೆ ಪಡೆದಿದ್ದ ಜಿಲ್ಲೆಯ 27,637 ರೈತರಿಗೆ ಒಟ್ಟು ₹44,34,77,748ವಿಮಾ ಮೊತ್ತವು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ.
ಪ್ರಕೃತಿ ವಿಕೋಪಗಳಿಂದ ತಮ್ಮ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ಒದಗಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಶೇ. 50:50 ನೆರವಿನ ಈ ಯೋಜನೆಯಡಿ, 2023- 24ರಲ್ಲಿ ತಮ್ಮ ಮುಂಗಾರು ಬೆಳೆಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ವಿಮೆ ಪಡೆದಿದ್ದ ಜಿಲ್ಲೆಯ ರೈತರಿಗೆ ಈ ಪರಿಹಾರದ ಮೊತ್ತ ಬಿಡುಗಡೆಗೊಂಡಿದೆ.ಜಿಲ್ಲೆಯಲ್ಲಿ ಈ ಯೋಜನೆಯಡಿ ನೊಂದಾವಣೆ ಮಾಡಿಕೊಂಡಿದ್ದ, ಭಟ್ಕಳ ತಾಲೂಕಿನ 271 ರೈತರಿಗೆ ₹1,54,644 , ದಾಂಡೇಲಿ ತಾಲೂಕಿನ 103 ರೈತರಿಗೆ ₹4,63,893, ಹಳಿಯಾಳ ತಾಲೂಕಿನ 8883 ರೈತರಿಗೆ ₹5,35,41,942 , ಹೊನ್ನಾವರ ತಾಲೂಕಿನ 84 ರೈತರಿಗೆ ₹36,671, ಜೋಯಿಡಾ ತಾಲೂಕಿನ 275 ರೈತರಿಗೆ ₹1,29,795, ಕುಮಟಾ ತಾಲೂಕಿನ 57 ರೈತರಿಗೆ ₹50,408, ಮುಂಡಗೋಡ ತಾಲೂಕಿನ 7041 ರೈತರಿಗೆ ₹20,28,49,480, ಸಿದ್ದಾಪುರ ತಾಲೂಕಿನ 421 ರೈತರಿಗೆ ₹3,59,997, ಶಿರಸಿ ತಾಲೂಕಿನ 9123 ರೈತರಿಗೆ ₹17,72,58,214, ಯಲ್ಲಾಪುರ ತಾಲೂಕಿನ 1379 ರೈತರಿಗೆ ₹86,32,698 ಸೇರಿದಂತೆ ಒಟ್ಟು ₹44.34 ಕೋಟಿ ರೂ ಮೊತ್ತವು ರೈತರ ಖಾತೆಗಳಿಗೆ ಜಮೆಗೊಂಡಿದೆ.
2023- 24ರ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಭತ್ತ, ಮೆಕ್ಕಜೋಳ ಮತ್ತು ಹತ್ತಿ ಬೆಳೆಗಳನ್ನು ಅಧಿಸೂಚಿತ ಬೆಳೆಗಳನ್ನಾಗಿ ಗುರುತಿಸಿದ್ದು, ಜಿಲ್ಲೆಯಲ್ಲಿ ಈ ಬೆಳೆಗಳನ್ನು ಬೆಳೆಯುವ 27,637 ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ₹44 ಕೋಟಿಗಳಿಗೂ ಅಧಿಕ ಮೊತ್ತದ ವಿಮಾ ಮೊತ್ತ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ. 2023- 24ರಲ್ಲಿ ಮುಂಗಾರು ಕೊರತೆಯಿಂದ ಜಿಲ್ಲೆಯ 11 ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿದೆ.