ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ,
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ2018-19 ರಲ್ಲಿ ನಾನು ಶಾಸಕನಾಗಿದ್ದಾಗ ನಗರೋತ್ಥಾನ ವಿಶೇಷ ಅನುದಾನವಾಗಿ ನ.ರಾ.ಪುರ, ಕೊಪ್ಪಕ್ಕೆ ತಲಾ 2 ಕೋಟಿ , ಶೃಂಗೇರಿಗೆ 1 ಕೋಟಿ ಸೇರಿ 5 ಕೋಟಿ ಮಂಜೂರು ಮಾಡಿಸಿದ್ದೆ. ಆದರೆ, ಸಮ್ಮಿಶ್ರ ಸರ್ಕಾರ ಆ ಹಣವನ್ನು ತಡೆ ಹಿಡಿದಿತ್ತು. ಬೆಳಗಾಂ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡಿ ಮತ್ತೆ 5 ಕೋಟಿ ಬಿಡುಗಡೆ ಮಾಡಿಕೊಂಡು ಬಂದಿದ್ದೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನರಸಿಂಹರಾಜ ಪುರ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ನೇತೃತ್ವದಲ್ಲಿ ಸದಸ್ಯರ ನಿಯೋಗ ಬೆಳಗಾಂ ಗೆ ಬಂದಿದ್ದರು. ಸಂಬಂಧಪಟ್ಟ ಮಂತ್ರಿಗಳು ಬುಧವಾರ 5 ಕೋಟಿ ಬಿಡುಗಡೆಗೆ ಆದೇಶ ಮಾಡಿದ್ದು ಶೀಘ್ರ ಹಣ ಬಿಡುಗಡೆಯಾಗಲಿದೆ. ಈ ಬಗ್ಗೆ ಕ್ರಿಯಾ ಯೋಜನೆ ತಯಾರಿಸಿದ್ದು ತಕ್ಷಣ ಟೆಂಡರ್ ಕರೆಯಲಾಗುವುದು ಎಂದರು. ಬಗರ್ ಹುಕಂ ಸಮಿತಿ ರಚನೆ: ಈ ತಿಂಗಳ ಅಂತ್ಯದೊಳಗೆ ಬಗರ್ ಹುಕಂ ಸಮಿತಿ ರಚನೆಯಾಗಲಿದೆ. ಕನಿಷ್ಟ ಪ್ರತಿ ತಿಂಗಳು ಒಂದು ಸಭೆ ನಡೆಸ ಲಾಗುವುದು. ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಜಮೀನುಗಳ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳು ಸಭೆ ಕರೆದಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಬಾಗಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಜಮೀನುಗಳು ಜಂಟಿ ಸರ್ವೆ ಮಾಡಲು 15 ಸರ್ವೇಯರ್ ನೇಮಕ ಮಾಡಲಾಗಿದೆ. ಶೃಂಗೇರಿ ಕ್ಷೇತ್ರಕ್ಕೆ 5 ಸರ್ವೇಯರ್ ನೇಮಕ ಮಾಡಿದ್ದಾರೆ. ಸರ್ವೇಯರ್ಗಳು ಅಳತೆಗೆ ಬಂದಾಗ ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳು ಸ್ಥಳದಲ್ಲಿ ನಿಂತು ಗೊಂದಲ ಆಗದಂತೆ ಗಡಿ ಗುರುತಿಸಲು ಸಹಕಾರ ನೀಡಬೇಕು. 2004 ಕ್ಕಿಂತ ಮುಂಚೆ ಒತ್ತುವರಿ ಮಾಡಿದ ಭೂಮಿ ಬಿಟ್ಟು ಸರ್ವೆ ಮಾಡಲು ಸೂಚಿಸಲಾಗಿದೆ. ಗೋಮಾಳ ಹಾಗೂ ಇತರ ಕಂದಾಯ ಭೂಮಿಗಳಿಗೆ ಹಕ್ಕು ಪತ್ರ ನೀಡಲಿದ್ದೇವೆ ಎಂದರು. ಎಲೆ ಚುಕ್ಕಿ ರೋಗದ ಸಂಶೋಧನೆಗೆ 50 ಲಕ್ಷ:ಅಡಿಕೆ ಎಲೆ ಚುಕ್ಕಿ ರೋಗ ಹಾಗೂ ಅಡಿಕೆ ಹಳದಿ ಎಲೆ ರೋಗದ ಸಂಶೋಧನೆಗೆ ಸರ್ಕಾರ 50 ಲಕ್ಷ ರು. ಬಿಡುಗಡೆ ಮಾಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಜಿಲ್ಲಾದ್ಯಂತ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಮುಂದುವರಿದಿದೆ. ಕಾಡಾನೆಗಳು ಬೆಳೆ ಹಾನಿ ಮಾಡುತ್ತಿದೆ. ಆನೆಗಳ ತಡೆಗೆ ಆನೆ ಕಂದಕವೇ ಪರಿಹಾರವಲ್ಲ. ಇದರ ಜೊತೆಗೆ ರೇಲ್ವೆ ಬ್ಯಾರಿಕೇಡ್ ಪರಿಹಾರವಾಗಬಲ್ಲದು. ನಾನು ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದೇನೆ. ರೇಲ್ವೆ ಬ್ಯಾರಿಕೇಡ್ ಗೆ 120 ಕೋಟಿ ರು. ಮೀಸಲಿಟ್ಟಿದ್ದಾರೆ. ಮುಂದಿನ ಬಜೆಟ್ ನಲ್ಲೂ ಇನ್ನಷ್ಟು ಅನುದಾನ ನೀಡಲು ಬೇಡಿಕೆ ಇಡುತ್ತೇನೆ ಎಂದರು. ಶೇ.80 ರಷ್ಟು ಗುಂಡಿ ಮುಚ್ಚಲಾಗಿದೆ: ಶೃಂಗೇರಿ ಕ್ಷೇತ್ರದಲ್ಲಿ ಶೇ.80 ರಷ್ಟು ರಸ್ತೆ ಗುಂಡಿ ಮುಚ್ಚಲಾಗಿದೆ. ಉಳಿದ ಗುಂಡಿಗಳನ್ನು ಮುಂದಿನ 15 ದಿನದ ಒಳಗಾಗಿ ಮುಚ್ಚಲಾಗುವುದು. ಯಾವುದಾದರೂ ರಸ್ತೆ ಗುಂಡಿಗಳು ಉಳಿದಿದ್ದರೆ ಸಾರ್ವಜನಿಕರು ನನ್ನ ಗಮನಕ್ಕೆ ತರಬಹುದು. ಪಿಆರ್‌ಡಿ ರಸ್ತೆಯ ಕ್ರಿಯಾ ಯೋಜನೆ ತಯಾರಿಸಲಾಗಿದ್ದು ಹಣವೂ ಮಂಜೂರಾಗಿದೆ. ಅಗತ್ಯ ಇದ್ದ ಕಡೆ ಮರು ಡಾಂಬರೀಕರಣ ಮಾಡಲಾಗುವುದು ಎಂದರು.