ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಜಯನಗರ ನಾಗರಿಕರ ವೇದಿಕೆ ವತಿಯಿಂದ ಬಳ್ಳಾರಿ ಲೋಕಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಪ್ರಜಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ನೂತನ ಸಂಸದರು ಪ್ರಣಾಳಿಕೆಯ ಅಂಶಗಳನ್ನು ಅನುಷ್ಠಾನಗೊಳಿಸಬೇಕು ಎಂಬುದು ವಿಜಯನಗರ ಜಿಲ್ಲೆಯ ಮತದಾರರ ಒತ್ತಾಸೆಯಾಗಿದೆ ಎಂದು ನಂದಿಪುರ ಶ್ರೀ ಕ್ಷೇತ್ರದ ಮಹೇಶ್ವರ ಮಹಸ್ವಾಮಿಗಳು ಹಾಗೂ ಮರಿಯಮ್ಮನಹಳ್ಳಿಯ ಒಪ್ಪೇತ್ತೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಸದಸ್ಯರು ಮತದಾರರಿಗೆ ಹೆಚ್ಚು ಉತ್ತರದಾಯಿತ್ವವನ್ನಾಗಿಸುವ ಹಾಗೂ ತಳಮಟ್ಟದಲ್ಲಿ ಮತದಾರರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಆಡಳಿತದಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ಪ್ರಜಾ ಪ್ರಣಾಳಿಕೆ ಅಗತ್ಯವಾಗಿದೆ. ಹೀಗಾಗಿ, ಪಕ್ಷಗಳಿಂದ ಪ್ರಜೆಗಳಿಗೆ ಪ್ರಣಾಳಿಕೆ ಆರ್ಪಿಸುವುದಕ್ಕಿಂತ ಪ್ರಜೆಗಳೆ ತಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಪ್ರಜಾ ಪ್ರಣಾಳಿಕೆ ರೂಪಿಸುವುದು ಹೆಚ್ಚು ಸಮಂಜಸ ಎನಿಸುತ್ತದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುವ ನೂತನ ಸಂಸದರು, ಪ್ರಜಾ ಪ್ರಣಾಳಿಕೆ ಬೇಡಿಕೆಗಳನ್ನು ಜಾರಿಗೊಳಿಸುವಲ್ಲಿ ಕಾರ್ಯ ಪ್ರವೃತ್ತರಾಗಲಿ ಎಂಬುದು ವಿಜಯನಗರ ಜಿಲ್ಲೆಯ ಮತದಾರರ ಒತ್ತಾಸೆಯಾಗಿದೆ ಎಂದರು.
ಪ್ರಜಾ ಪ್ರಣಾಳಿಕೆ ಹೀಗಿದೆಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರಕಾರದ ಸಹಕಾರ ಮತ್ತು ಆರ್ಥಿಕ ನೆರವು, ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಲೋಕರ್ಪಣೆ ಮಾಡುವುದು. ದರೋಜಿ-ಕಂಪ್ಲಿ-ಗಂಗಾವತಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ. ಹಂಪಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲು ಕ್ರಮವಹಿಸುವುದು.ಬಳ್ಳಾರಿ, ಕಂಪ್ಲಿ, ಕುರುಗೊಡು, ಸಿರುಗುಪ್ಪ ತಾಲುಕುಗಳಲ್ಲಿ ಎರಡನೇ ಬೆಳೆಗೆ ಅನುಕೂಲವಾಗುವಂತೆ ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡುವುದು. ನ್ಯಾ. ಬಚಾವತ್ ಆಯೋಗದ ಶಿಫಾರಸ್ಸಿನಂತೆ ಪುರಾತನ ವಿಜಯನಗರ ಕಾಲುವೆಗಳಿಗೆ ನೀರು ಹಂಚಿಕೆ ಪ್ರಮಾಣವನ್ನು ಶಾಸನಬದ್ಧ ಗೊಳಿಸುವುದು. ಹೊಸಪೇಟೆ ರೈಲು ನಿಲ್ದಾಣದ ವಿಸ್ತರಣೆ, ನೂತನವಾಗಿ ಎರಡು ಪ್ಲಾಟ್ ಫಾರಂ ನಿರ್ಮಾಣ, ಪಿಟ್ ಲೈನ್ ನಿರ್ಮಾಣ, ಕಾರಿಗನೂರಿನಲ್ಲಿ ಗೂಡ್ಸ್ ಗಾಡಿಗಳ ಕಾರ್ಯಗಾರ ಸ್ಥಾಪನೆ, ಅನಂತಶಯನಗುಡಿ ರೈಲ್ವೇ ಮೇಲುಸೇತುವೆ (ಎಲ್.ಸಿ. ಗೇಟ್ ನಂ : 85) ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವುದು, ಸಂಡೂರು ತಾಲೂಕಿಗೆ ಪ್ರಯಾಣಿಕರ ರೈಲು ಸಂಪರ್ಕ ಹಾಗೂ ತಾಲೂಕಿನ ಸ್ವಾಮಿ ಹಳ್ಳಿ-ರಾಯದುರ್ಗ ನಡುವೆ ನೂತನ ರೈಲು ಮಾರ್ಗ ನಿರ್ಮಾಣ, ವಿಜಯನಗರ ಜಿಲ್ಲೆಯಲ್ಲಿ ಏಮ್ಸ್(ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಸ್ಥಾಪನೆ, ಹರಪನಹಳ್ಳಿ-ಹಡಗಲಿ ಮುಂಡರಗಿ-ಗದಗ ನಡುವೆ ನೂತನ ರೈಲು ಮಾರ್ಗ ನಿರ್ಮಾಣ. ಮರಿಯಮ್ಮಹಳ್ಳಿ-ಹಗರಿಬೊಮ್ಮನಹಳ್ಳಿ-ಹರಪನಹಳ್ಳಿ ಹರಿಹರ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ರೈಲ್ವೆ ಮೇಲ್ಸುತುವೆ ಮತ್ತು ಅಂಡರ್ ಪಾಸ್ ನಿರ್ಮಾಣಕ್ಕೆ ಚಾಲನೆ ನೀಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಣಾಳಿಕೆಯಲ್ಲಿ ಒತ್ತಾಯಿಸಲಾಗಿದೆ ಎಂದರು.
ವೇದಿಕೆ ಅಧ್ಯಕ್ಷ ವೈ ಯಮುನೇಶ್, ಉಪಾಧ್ಯಕ್ಷ ಪ್ರೊ. ಉಮಾಮಹೇಶ್ವರ್ ಹಾಗೂ ಕಾರ್ಯದರ್ಶಿ ಯು ಆಂಜನೇಯಲು ಇತರರಿದ್ದರು.