₹1800 ಕೋಟಿ ರು. ಬಾಕಿ ಹಣ ಬಿಡುಗಡೆಗೊಳಿಸಿ: ಎಚ್.ಸಿ. ಉಮೇಶ್

KannadaprabhaNewsNetwork |  
Published : Oct 14, 2026, 01:30 AM IST
ಪೋಟೋ: 13ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಎಚ್.ಸಿ. ಉಮೇಶ್ ಮಾತನಾಡಿದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ 2022-23ನೇ ಸಾಲಿನಿಂದ ಸುಮಾರು 1800 ಕೋಟಿ ರು. ಬಾಕಿ ಹಣ ವಿವಿಧ ಇಲಾಖೆಗಳಿಂದ ಬಿಡುಗಡೆ ಆಗಬೇಕು. ಕಾಮಗಾರಿಗಳು ನಡೆಯುತ್ತಿದ್ದು, ಬಿಲ್‌ಗಳನ್ನೂ ಸಲ್ಲಿಸಲಾಗುತ್ತಿದೆ. ಆದರೆ, ಸಣ್ಣಪುಟ್ಟ ಕಾಮಗಾರಿಗಳಿಗೆ ಮಾತ್ರ ಹಣ ಬಿಡುಗಡೆಯಾಗುತ್ತಿದೆ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಮಲೆನಾಡು ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಎಚ್.ಸಿ. ಉಮೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ 2022-23ನೇ ಸಾಲಿನಿಂದ ಸುಮಾರು 1800 ಕೋಟಿ ರು. ಬಾಕಿ ಹಣ ವಿವಿಧ ಇಲಾಖೆಗಳಿಂದ ಬಿಡುಗಡೆ ಆಗಬೇಕು. ಕಾಮಗಾರಿಗಳು ನಡೆಯುತ್ತಿದ್ದು, ಬಿಲ್‌ಗಳನ್ನೂ ಸಲ್ಲಿಸಲಾಗುತ್ತಿದೆ. ಆದರೆ, ಸಣ್ಣಪುಟ್ಟ ಕಾಮಗಾರಿಗಳಿಗೆ ಮಾತ್ರ ಹಣ ಬಿಡುಗಡೆಯಾಗುತ್ತಿದೆ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಮಲೆನಾಡು ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಎಚ್.ಸಿ. ಉಮೇಶ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಮಗಾರಿ ಪೂರ್ಣಗೊಳಿಸಿ ಬಿಲ್ ಸಲ್ಲಿಸಿದ್ದರೂ ಪಾವತಿ ವಿಳಂಬವಾಗುತ್ತಿದೆ. ಕಾರ್ಮಿಕರಿಗೆ ವೇತನ ನೀಡುವುದು, ಕಾಮಗಾರಿಗೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸುವುದು ಹಾಗೂ ಬ್ಯಾಂಕ್ ಸಾಲ ಮರುಪಾವತಿ ಮಾಡುವುದು ಕಷ್ಟವಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಕಾರ್ಮಿಕರಿಗೆ ವೇತನ ಮತ್ತು ಬೋನಸ್ ನೀಡಬೇಕಿರುವುದರಿಂದ, ಈಗಾಗಲೇ ಅನುದಾನ ಬಿಡುಗಡೆಯಾಗಿರುವ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ನೀರಾವರಿ ನಿಗಮದಲ್ಲಿ (ಕೆಎನ್‌ಎನ್‌ಎಲ್) ಬಿಲ್‌ಗಳು ಪಾವತಿಗೆ ಶಿಫಾರಸಾಗುವ ಮೊದಲು ೩೦ರಿಂದ ೩೫ ಹಂತಗಳನ್ನು ದಾಟಬೇಕಿದೆ. ಇದರಿಂದ ಪಾವತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಅನುಸರಿಸುತ್ತಿರುವಂತೆ ಸರಳ, ಪಾರದರ್ಶಕ ಹಾಗೂ ತ್ವರಿತ ಪಾವತಿ ವ್ಯವಸ್ಥೆಯನ್ನು ಕೆಎನ್‌ಎನ್‌ಎಲ್‌ನಲ್ಲಿಯೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಮಗಾರಿ ಪೂರ್ಣಗೊಂಡ ಬಳಿಕ ಅಳತೆ ಪುಸ್ತಕ (ಎಂಬಿ) ಸಿದ್ಧಪಡಿಸುವುದು, ಬಿಲ್ ಪರಿಶೀಲನೆ ಸೇರಿದಂತೆ ಅಗತ್ಯ ದಾಖಲೆಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬಿಲ್‌ಗಳನ್ನು ನಿಗದಿತ ಕಾಲಮಿತಿಯಲ್ಲಿ ಪಾವತಿಸಬೇಕು. ಅನುದಾನದ ಲಭ್ಯತೆ ಖಚಿತಪಡಿಸಿಕೊಳ್ಳದೆ ಟೆಂಡರ್ ಆಹ್ವಾನಿಸುವುದರಿಂದ ಗುತ್ತಿಗೆದಾರರು ಸಾಲ ಮಾಡಿ ಕಾಮಗಾರಿ ನಿರ್ವಹಿಸಬೇಕಾಗುತ್ತದೆ. ಹೀಗಾಗಿ, ಅನುದಾನ ಖಚಿತವಾದ ಬಳಿಕವೇ ಟೆಂಡರ್ ಕರೆಯಬೇಕು ಎಂದರು.

ಪ್ಯಾಕೇಜ್ ಟೆಂಡರ್‌ಗಳ ಬದಲು ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಅವಕಾಶ ದೊರೆಯುವುದರ ಜತೆಗೆ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಕೆಎನ್‌ಎನ್‌ಎಲ್‌ನಲ್ಲಿ ಗುತ್ತಿಗೆದಾರರು ಠೇವಣಿ ಇಟ್ಟಿರುವ ಇಎಂಡಿ (ಟೆಂಡರ್ ಪ್ರಕ್ರಿಯೆಯಲ್ಲಿನ ಅರ್ನೆಸ್ಟ್ ಮನಿ ಡೆಪಾಸಿಟ್) ಮತ್ತು ಎಫ್‌ಎಸ್‌ಡಿ (ಭದ್ರತಾ ಠೇವಣಿ) ಹಣ ಐದರಿಂದ ಆರು ವರ್ಷಗಳಿಂದ ಬಾಕಿ ಉಳಿದಿದೆ. ಈ ಹಣವನ್ನು ಇತರ ಗುತ್ತಿಗೆದಾರರ ಬಿಲ್ ಪಾವತಿಗೆ ಬಳಸಲಾಗಿದೆ ಎಂಬ ಆರೋಪದ ಕುರಿತು ಪರಿಶೀಲನೆ ನಡೆಸಬೇಕು. ನಿಯಮಾನುಸಾರ ಗುತ್ತಿಗೆದಾರರಿಗೆ ಠೇವಣಿ ಹಣ ಹಿಂದಿರುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಜಿ.ಎಂ. ಜಗದೀಶ್ ಮಾತನಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬಿಲ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಪಾವತಿ ವಿಳಂಬ ಮಾಡುವ ಅಧಿಕಾರಿಗಳ ಹೊಣೆಗಾರಿಕೆ ನಿಗದಿಪಡಿಸಬೇಕು. ಅನ್ವಯಿಸುವ ಕಾನೂನು ಮತ್ತು ನಿಯಮಗಳ ಪ್ರಕಾರ ವಿಳಂಬ ಪಾವತಿಗೆ ಬಡ್ಡಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಈ ಮೂಲಕ ಗುತ್ತಿಗೆದಾರರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಗುತ್ತಿಗೆದಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅನುದಾನ ಬಿಡುಗಡೆಯಾಗಿರುವ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ಪಾವತಿಸುವ ಮೂಲಕ ಗುತ್ತಿಗೆದಾರರು ಕಾರ್ಮಿಕರಿಗೆ ವೇತನ ಮತ್ತು ಬೋನಸ್ ನೀಡಲು ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ದೇವರಾಜ್, ಸಂತೋಷ್, ಚಂದ್ರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಕಲಬೆರಕೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಮನ್ಮುಲ್ ಒಕ್ಕೂಟಕ್ಕೆ ಮುತ್ತಿಗೆ