ಕನ್ಹೇರಿ ಶ್ರೀಗಳ ಮೇಲಿನ ನಿರ್ಬಂಧ ಹಿಂಪಡೆಯಿರಿ

KannadaprabhaNewsNetwork |  
Published : Oct 26, 2025, 02:00 AM IST
ಕನ್ಹೇರಿ ಮಠದ ಶ್ರೀಗಳನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧವಿಧಿಸಿರುವುದನ್ನು ಖಂಡಿಸಿ ಶನಿವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಕನ್ಹೇರಿ ಶ್ರೀಗಳು ಸಾವಿರಾರು ಗೋವುಗಳ ಸಂರಕ್ಷಣೆ, ಶಿಕ್ಷಣ, ದಾನ, ಧರ್ಮ ಮತ್ತು ಕೃಷಿ ಪುನರುಜ್ಜೀವನ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರ ಮೇಲೆ ರಾಜಕೀಯ ಹಾಗೂ ಧಾರ್ಮಿಕ ಕಾರಣಗಳಿಂದಾಗಿ ಸರ್ಕಾರ ನಿಷೇಧ ವಿಧಿಸಿರುವುದು ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಯಾಗಿದೆ.

ಹುಬ್ಬಳ್ಳಿ:

ಹಿಂದೂ ಧರ್ಮದ ಪರವಾಗಿ ಸಮಾಜ ಪರಿವರ್ತನೆ ಕಾರ್ಯ ಮಾಡುತ್ತಿರುವ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳಿಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಶನಿವಾರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಮಾತನಾಡಿ, ಸಂತರ ಮೇಲೆ ನಿರ್ಬಂಧ ಹೇರಿರೋದು ರಾಜ್ಯದಲ್ಲಿ ಇದೇ ಮೊದಲು. ಆ ಮೂಲಕ ಸಂತರಿಗೆ ಅಪಮಾನ ಮಾಡಲಾಗಿದೆ. ಸಂತರ ಮೇಲೆ ನಿರ್ಬಂಧ ಹೇರಿದ ಸರ್ಕಾರ ಸರ್ವನಾಶವಾಗುತ್ತೆ.‌‌ ಸಂತರ ಶಾಪದಿಂದ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ. ಈ ಕೂಡಲೇ ಕನ್ಹೇರಿ ಶ್ರೀಗಳಿಗೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಿ ಬಹಿರಂಗವಾಗಿ ಶ್ರೀಗಳಿಗೆ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನೀಲಕಂಠ ಮಠದ ಶಿವಶಂಕರ ಶ್ರೀ ಮಾತನಾಡಿ, ಕನ್ಹೇರಿ ಶ್ರೀಗಳು ಸಾವಿರಾರು ಗೋವುಗಳ ಸಂರಕ್ಷಣೆ, ಶಿಕ್ಷಣ, ದಾನ, ಧರ್ಮ ಮತ್ತು ಕೃಷಿ ಪುನರುಜ್ಜೀವನ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರ ಮೇಲೆ ರಾಜಕೀಯ ಹಾಗೂ ಧಾರ್ಮಿಕ ಕಾರಣಗಳಿಂದಾಗಿ ಸರ್ಕಾರ ನಿಷೇಧ ವಿಧಿಸಿರುವುದು ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಯಾಗಿದ್ದು, ಧಾರ್ಮಿಕ ಸಹಿಷ್ಣುತೆಗೂ ಧಕ್ಕೆಯಾಗಿದೆ. ಇದು ಶ್ರೀಗಳಿಗೆ ಮಾಡಿದ ಅಪಮಾನವಲ್ಲ, ಇಡೀ ರೈತ ಕುಲಕ್ಕೆ ಮಾಡಿದ ಅಪಮಾನವಾಗಿದೆ. ಸರ್ಕಾರದ ಪಾಪದ ಕೊಡ ತುಂಬಿದೆ. ಹಾಗಾಗಿ ಇಂತಹ ನಿರ್ಣಯಕ್ಕೆ ಸರ್ಕಾರ ಕೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಹಾಂತೇಶ ಟೋಂಗಳೆ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸು ದುರ್ಗದ, ಸಹ ಕಾರ್ಯದರ್ಶಿ ಮಂಜು ಕಾಟಕರ, ಪೂರ್ಣಿಮಾ ಕಾಡಮ್ಮನವರ, ಶಿವಾನಂದ ಸತ್ತಿಗೇರಿ, ಅಶೋಕ ಬೋಜ, ರಾಜು ಧರಣ್ಣೆವರ, ವಿಟೋಬ ಮಾನಶೇಖರ, ಬಸು ಗೌಡರ ಸೇರಿದಂತೆ ಹಲವರಿದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ