ಕನ್ನಡಪ್ರಭ ವಾರ್ತೆ ತುರುವೇಕೆರೆ
ಗಂಡ ಮಕ್ಕಳು ಇಲ್ಲದೇ, ಸೂರೂ ಇಲ್ಲದೇ ಅನಾಥರಾಗಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ವೃದ್ಧೆಗೆ ಮನೆ ನಿರ್ಮಿಸಿಕೊಡುವ ಮೂಲಕ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾನವೀಯತೆ ಮೆರೆದಿದೆ.ತಾಲೂಕಿನ ಆನೇಕೆರೆ ಭೋವಿ ಕಾಲೋನಿಯ ಸುಮಾರು 70 ವರ್ಷದ ಗಂಗಮ್ಮರಿಗೆ ಗಂಡ ಮತ್ತು ಮಕ್ಕಳು ಇಲ್ಲ. ಇದುವರೆಗೂ ತನ್ನ ಜೀವಿತಾವಧಿಯನ್ನು ಸಣ್ಣ ಗುಡಿಸಲಿನಲ್ಲೇ ಕಳೆದಿದ್ದರು. ಇದನ್ನು ಗಮನಿಸಿದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಆಕೆಗೆ ಸೂರೊಂದು ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ.ವಾತ್ಸಲ್ಯ ಮನೆ ಹಸ್ತಾಂತರವನ್ನು ಮಾಡಿದ ತುಮಕೂರು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 800 ವರ್ಷಗಳ ಇತಿಹಾಸವಿದೆ. ಶ್ರೀ ಕ್ಷೇತ್ರದಲ್ಲಿ ಚತುರ್ಧಾನಗಳಲ್ಲಿ. ಅನ್ನದಾನ, ವಿದ್ಯಾದಾನ, ಔಷಧ ದಾನ, ಅಭಯದಾನವನ್ನು ಮುನ್ನೆಡೆಸಿಕೊಂಡು ಬರುತ್ತಿದೆ. ಸಮಾಜದಲ್ಲಿ ನೊಂದವರನ್ನು ಗುರುತಿಸಿ ಬದುಕಲು ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ದುಡಿಯಲು ಆಗದವರಿಗೆ ಜೀವನ ಪರ್ಯಂತ ಪ್ರತಿ ತಿಂಗಳು ಮಾಶಾಸನ ಕೊಡಲಾಗುತ್ತಿದೆ. ಸೂರು ಇಲ್ಲದವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ ಎಂದರು.ತುರುವೇಕೆರೆ ತಾಲೂಕಿನಲ್ಲಿ ಒಟ್ಟು 7 ವಾತ್ಸಲ್ಯ ಮನೆ ರಚನೆ ಆಗಿದೆ. ರಾಜ್ಯದಲ್ಲಿ ಒಟ್ಟು 666 ವಾತ್ಸಲ್ಯ ಮನೆ ರಚನೆ ಆಗಿದೆ. 95 ಮಾಶಾಸನ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ಅಂದರೆ ಬಟ್ಟೆ ಚಾಪೆ, ದಿಂಬು, ಹೊದಿಕೆ, ಪಾತ್ರೆ ನೀಡಲಾಗುತ್ತಿದೆ. ವಾತ್ಸಲ್ಯ ಫುಡ್ ನ್ನು 15 ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಮಾಸಾಶನವಾಗಿ ಪ್ರತಿ ತಿಂಗಳು 1,000 ದಿಂದ 3,000 ದಂತೆ ಮಾಶಾಸನ ನೀಡಲಾಗುತ್ತಿದೆ. ತಾಲೂಕಿನಲ್ಲಿ 15 ಕೆರೆ ಕಾಮಗಾರಿ, 27 ಶುದ್ಧಗಂಗಾ ಘಟಕ, 256 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ವೇತನ ನೀಡಲಾಗುತ್ತಿದೆ ಎಂದು ಸತೀಶ್ ಸುವರ್ಣ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಯೋಜನಾಧಿಕಾರಿ ವೆಂಕಟಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವಾತ್ಸಲ್ಯ ಪ್ರೀತಿ ಮಮತೆ, ಮಾನವೀಯತೆ ಇದೆ ಎಂಬುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ನಿರಂತರವಾಗಿ ಸಾಬೀತುಪಡಿಸುತ್ತಿದೆ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಜನರ ಕಣ್ಣೀರು ಒರೆಸುತ್ತಿರುವುದು ಶ್ಲಾಘನೀಯ ಕಾರ್ಯ. ಅವರು ಆಧುನಿಕ ಸಮಾಜದ ಶಕ್ತಿಯಾಗಿದ್ದಾರೆ ಎಂದರು. ವಿದ್ಯಾರ್ಥಿಗಳಿಂದ ಹಿಡಿದು ವಯಸ್ಸಾದ ಹಿರಿಯರ ಬಗ್ಗೆ ವಿಶೇಷವಾಗಿ ಅರ್ಥಪೂರ್ಣ ಕೆಲಸ ಮಾಡುತ್ತಿರುವುದು ಉತ್ತಮವಾದ ಕೊಡುಗೆಯಾಗಿದೆ. ಪೂಜ್ಯ ದಂಪತಿಗಳಿಗೆ ಇನ್ನಷ್ಟು ಸೇವೆ ಸಲ್ಲಿಸಲು ದೇವರು ಶಕ್ತಿ ಕರುಣಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಯೋಜನಾಧಿಕಾರಿ ಶಾಲಿನಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಮೇಶ್, ಜನಜಾಗೃತಿ ಸದಸ್ಯರಾದ ಗಂಗರಾಜು, ಕುಮಾರ್. ಗ್ರಾಮದ ಗುಡಿಗೌಡರಾದ ತಿರುಮಲಯ್ಯ, ವಲಯದ ಮೇಲ್ವಿಚಾರಕ ಅರುಣ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಭಾಗ್ಯಮ್ಮ, ಸೇವಾ ಪ್ರತಿನಿಧಿ ಮೋಹನ ಕುಮಾರಿ ಸೇರಿದಂತೆ ಸರ್ವ ಸದಸ್ಯರ ಸಮ್ಮುಖ ವೀರೇಂದ್ರ ಹೆಗಡೆಯವರ 58 ನೇ ವರ್ಷದ ಪಟ್ಟಾಭಿಷೇಕದ ನೆನಪಿಗಾಗಿ ವಾತ್ಸಲ್ಯ ಫಲಾನುಭವಿ ಗಂಗಮ್ಮನವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು. ಅಲ್ಲದೇ ಗಿಡಗಳನ್ನು ನೆಡುವುದರ ಮೂಲಕ ವೀರೇಂದ್ರ ಹೆಗಡೆಯವರ ಪಟ್ಟಾಭಿಷೇಕದ ನೆನಪನ್ನು ಸಾರ್ಥಕಪಡಿಸಿಕೊಳ್ಳಲಾಯಿತು. 24 ಟಿವಿಕೆ 1 – ತುರುವೇಕೆರೆ ತಾಲೂಕು ಆನೇಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಮಿಸಿರುವ ವಾತ್ಸಲ್ಯ ಮನೆಯನ್ನು ಫಲಾನುಭವಿ ಗಂಗಮ್ಮನವರಿಗೆ ಹಸ್ತಾಂತರಿಸಲಾಯಿತು.