- ವೈಜ್ಞಾನಿಕ ಜಾತಿಗಣತಿ ವರದಿ ಈಗ ವಿರೋಧಿಸುವವರು ಆಗ ಏನು ಮಾಡುತ್ತಿದ್ದರು ಎಂದು ಜಿ.ಬಿ.ವಿನಯಕುಮಾರ ಪ್ರಶ್ನೆ
ರಾಜ್ಯ ಸರ್ಕಾರ ಯಾವುದೇ ಒತ್ತ, ಪ್ರಭಾವಕ್ಕೂ ಮಣಿಯದೇ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಸ್ವಾಭಿಮಾನಿ ಬಳಗ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವೈಜ್ಞಾನಿಕವಾಗಿ ಸಿದ್ಧಗೊಂಡ ಜಾತಿಗಣತಿ ವರದಿಗೆ ಸಚಿವ ಸಂಪುಟದ ಅನುಮೋದನೆ ಪಡೆದು, ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ರಾಜ್ಯದ ಎಲ್ಲ ಜಾತಿ, ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು 2015ರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿಯನ್ನು ರಾಜ್ಯ ಹಿಂದುಳಿದ ಆಯೋಗ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜು ನೇತೃತ್ವದಲ್ಲಿ ಏ.11ರಿಂದ 30 ದಿನಗಳ ಕಾಲ ರಾಜ್ಯಾದ್ಯಂತ ಮನೆ ಮನೆಗಳಿಗೆ ತೆರಳಿ, ರಾಜ್ಯದ 1351 ಜಾತಿಗಳ ಪಟ್ಟಿ ಸಿದ್ಧಪಡಿಸಿ, ಜಾತಿ ಗಣತಿ ಮಾಡಲಾಗಿದೆ. ಗಣತಿ ಪೂರ್ಣವಾಗಿ ವರ್ಷಗಳೇ ಕಳೆದರೂ ಇಂದಿಗೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಈಗ ಜಾತಿ ಗಣತಿಗೆ ವಿರೋಧಿಸುತ್ತಿರುವವರು ಗಣತಿ ಆರಂಭದಲ್ಲೇ ಅಥವಾ ಗಣತಿ ಮುಗಿದ ನಂತರವಾದರೂ ತಮ್ಮಲ್ಲಿ ಅನುಮಾನಗಳಿದ್ದಿದ್ದರೆ ಅಂದೇ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಆದರೆ, ವರ್ಷಾನುಗಟ್ಟಲೇ ಸುಮ್ಮನಿದ್ದವರು ಈಗ ಜಾತಿಗಣತಿಯೇ ಅವೈಜ್ಞಾನಿಕ ಸಮೀಕ್ಷೆಯಾಗಿದೆ, ಜಾತಿಗಣತಿ ರದ್ದುಪಡಿಸಿ, ಹೊಸದಾಗಿ ಗಣತಿ ಕೈಗೊಳ್ಳುವಂತೆ ತೋಚಿದ ಸಲಹೆ, ಹೇಳಿಕೆಗಳ ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರವು ಜಾತಿ ಗಣತಿ ಪುರಸ್ಕರಿಸಿ, ಜಾರಿಗೊಳಿಸದೇ 9 ವರ್ಷಗಳು ವ್ಯರ್ಥವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಮಣಿಯದೇ, ನುಡಿದಂತೆ ನಡೆಯುತ್ತೇವೆಂಬ ಘೋಷವಾಕ್ಯಗಳನ್ನು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೇಳುವಂತೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ, ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಜಿ.ಬಿ.ವಿನಯಕುಮಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
- - -
- ಜಿ.ಬಿ.ವಿನಯಕುಮಾರ, ಸಂಸ್ಥಾಪಕ ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಬಳಗ
ದಾವಣಗೆರೆಯಲ್ಲಿ ಶುಕ್ರವಾರ ಸ್ವಾಭಿಮಾನಿ ಬಳಗ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.