ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ರಾಜಕಾರಣ ಮಾಡಬೇಕಾದ ಅವಶ್ಯಕತೆ ನನಗಿಲ್ಲ. ನಾನು ರಾಜ್ಯಾಧ್ಯಕ್ಷನಾಗಿ ಪಕ್ಷದ ಸಂಘಟನೆ ಹಾಗೂ ಬಲಪಡಿಸುವ ಬಗ್ಗೆ ಗಮನಹರಿಸಿದ್ದೇನೆ. ಯತ್ನಾಳ್ ಅವರಿಗೆ ಖಂಡಿತ ಒಳ್ಳೆಯದಾಗುವುದಿಲ್ಲ ಎಂದು ಹೇಳಿದರು.
ಈ ವಿಜಯೇಂದ್ರ ಬದಲಾವಣೆ ಮಾಡುವುದಕ್ಕೆ ಅವರ ಜೊತೆ ಇನ್ನೂ ಹತ್ತು ಜನರನ್ನು ಸೇರಿಸಿಕೊಳ್ಳಲಿ ನನಗೇನೂ ತೊಂದರೆ ಇಲ್ಲ. ಈಗಲೂ ಮನವಿ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು. ನಮ್ಮ ನಡವಳಿಕೆ ಸಂಘಟನೆಗೆ ಪೂರಕವಾಗಿ ಇರಬೇಕು. ಅದು ಬಿಟ್ಟು ತೊಂದರೆ ಕೊಡುವ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದರು.ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು. ಆದರೆ ಅವರಿಗೆ ಅರ್ಥ ಆಗುತ್ತಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಬೈಯುವುದೇ ಒಂದು ಪದವಿ ಅಂದುಕೊಂಡಿದ್ದಾರೆ. ಯತ್ನಾಳ್ ಅವರ ಉಚ್ಚಾಟನೆ ಕಾರ್ಯಕರ್ತರ ಅಪೇಕ್ಷೆ ಇದೆ. ಬಿಗಿ ಕ್ರಮ ಆಗಬೇಕು. ಇದರ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಅವರು ಹೇಳಿದರು.
ಚಾಡಿ ಹೇಳುವ ಅವಶ್ಯಕತೆ ನನಗಿಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಜಯೇಂದ್ರ, ಚಾಡಿ ಹೇಳುವುದಾಗಲಿ, ಯತ್ನಾಳರನ್ನು ಪಕ್ಷದಿಂದ ಹೊರ ಕಳಿಸಬೇಕೆಂಬ ಒತ್ತಾಯ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ. ಕಳೆದ ಮೂರ್ನಾಲ್ಕು ತಿಂಗಳುಗಳಲ್ಲಿ ನಾವು ಆಡಳಿತ ಪಕ್ಷವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿರುದ್ಧ ಹೋರಾಟಗಳಲ್ಲಿ ಮುಖ್ಯಮಂತ್ರಿಗಳನ್ನು ಕಟ್ಟಿ ಹಾಕುವ ಕೆಲಸ ಯಶಸ್ವಿಯಾಗಿ ಮಾಡಿದ್ದೇವೆ. ರಾಜ್ಯದ ಜನ ಭ್ರಷ್ಟ ಕಾಂಗ್ರೆಸ್ ಸರ್ಕಾರ ಎನ್ನುತ್ತಿದ್ದಾರೆ. ಇದರ ನಡುವೆ, ನಮ್ಮ ಕೆಲ ಮುಖಂಡರು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ರಾಜ್ಯ ಕಂಡ ಧೀಮಂತ ನಾಯಕ, ರೈತ ಮುಂದಾಳು ಯಡಿಯೂರಪ್ಪರ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.