೩೦ ವರ್ಷಗಳ ನಂತರ ಕಷ್ಟಪಟ್ಟು ಜಿಲ್ಲೆಯಲ್ಲಿ ಸಂಸದರನ್ನು ಗೆಲ್ಲಿಸಿದ್ದೇವೆ. ಒಂದೇ ಮನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಇದ್ದೀರಿ. ಆದರೂ ಜಗಳೂರು ಕ್ಷೇತ್ರಕ್ಕೆ ನೀವು ಕೊಟ್ಟ ಅನುದಾನವೇನು ಸ್ವಾಮಿ? ಕಳೆದ ಮೂರು ವರ್ಷಗಳಲ್ಲಿ ಜಗಳೂರು ತಾಲೂಕಿನ ಕಡೆಗೆ ತಿರುಗಿಯೂ ನೋಡಿಲ್ಲ. ನಿಮ್ಮ ಕುಟುಂಬಕ್ಕಾಗಿ ವೈಯಕ್ತಿಕವಾಗಿ ಪ್ರಾಣ ಕೊಡುವಷ್ಟು ಬೆಂಬಲ ನೀಡಿದ್ದೇನೆ. ಆದರೆ ಡಾ.ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಹಾಗೂ ಬರಪೀಡಿತವಾಗಿರುವ ಈ ಕ್ಷೇತ್ರವನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಿಲ್ಲ. ಈ ವಿಚಾರ ಸಂಪೂರ್ಣ ನಿರ್ಲಕ್ಷಿಸಿದ್ದೀರಿ ಎಂದು ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಸಂಸದೆ, ಸಚಿವರು, ಶಾಸಕರು ಒಂದೇ ಮನೆಯಲ್ಲಿದ್ದರೂ ಜಗಳೂರಿಗೆ ಕೊಡುಗೆ ಶೂನ್ಯ: ದೇವೇಂದ್ರಪ್ಪ
- - -
ಕನ್ನಡಪ್ರಭ ವಾರ್ತೆ ಜಗಳೂರು
೩೦ ವರ್ಷಗಳ ನಂತರ ಕಷ್ಟಪಟ್ಟು ಜಿಲ್ಲೆಯಲ್ಲಿ ಸಂಸದರನ್ನು ಗೆಲ್ಲಿಸಿದ್ದೇವೆ. ಒಂದೇ ಮನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಇದ್ದೀರಿ. ಆದರೂ ಜಗಳೂರು ಕ್ಷೇತ್ರಕ್ಕೆ ನೀವು ಕೊಟ್ಟ ಅನುದಾನವೇನು ಸ್ವಾಮಿ? ಕಳೆದ ಮೂರು ವರ್ಷಗಳಲ್ಲಿ ಜಗಳೂರು ತಾಲೂಕಿನ ಕಡೆಗೆ ತಿರುಗಿಯೂ ನೋಡಿಲ್ಲ. ನಿಮ್ಮ ಕುಟುಂಬಕ್ಕಾಗಿ ವೈಯಕ್ತಿಕವಾಗಿ ಪ್ರಾಣ ಕೊಡುವಷ್ಟು ಬೆಂಬಲ ನೀಡಿದ್ದೇನೆ. ಆದರೆ ಡಾ.ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಹಾಗೂ ಬರಪೀಡಿತವಾಗಿರುವ ಈ ಕ್ಷೇತ್ರವನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಿಲ್ಲ. ಈ ವಿಚಾರ ಸಂಪೂರ್ಣ ನಿರ್ಲಕ್ಷಿಸಿದ್ದೀರಿ ಎಂದು ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸುದೀರ್ಘ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮದೇ ಪಕ್ಷದ ಪ್ರಭಾವಿ ನಾಯಕ, ದಾವಣಗೆರೆ ಸಾಹುಕಾರ ಸಚಿವ ಮಲ್ಲಿಕಾರ್ಜುನ್ ವಿರುದ್ಧ ಆಕ್ರೋಶ ಹೊರಹಾಕಿದರು.
ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದರೂ ತಾಲೂಕಿನ ಅಭಿವೃದ್ಧಿಗೆ ಬಿಡಿಗಾಸು ನೀಡದೇ ನಿರ್ಲಕ್ಷಿಸಲಾಗಿದೆ. ಸೌಜನ್ಯಕ್ಕಾದರೂ ಕರೆ ಮಾಡಿ ''''''''ಜಗಳೂರು ತಾಲೂಕು ಬರ ಪಟ್ಟಿಯಿಂದ ಏಕೆ ಕೈಬಿಟ್ಟು ಹೋಯಿತು?'''''''' ಎಂಬ ಬಗ್ಗೆ ವಿಚಾರಿಸಿಲ್ಲ. ಚುನಾವಣೆ ಸಮಯದಲ್ಲಿ ಜಗಳೂರು ಮತ್ತು ಹರಪನಹಳ್ಳಿಯ ಅಂಗವಿಕಲ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಸಂಸದೆ ಡಾ.ಪ್ರಭಾ ಮೇಡಂ ಈಗ ಅದನ್ನು ಮರೆತಿದ್ದಾರೆ ಎಂದು ಸಚಿವರ ಹಾಗೂ ಸಂಸದರ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡರು.
ಕಲ್ಯಾಣ ಕರ್ನಾಟಕ ಸೇರ್ಪಡೆಯ ಹೊಸ ಹಾದಿ:
ನೀವು ಕಲಿಸಿಕೊಟ್ಟ ವ್ಯವಸ್ಥೆಯೇ ನನ್ನನ್ನು ಈ ರೀತಿ ಮಾತನಾಡುವಂತೆ ಮಾಡಿದೆ. ಕ್ಷೇತ್ರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ, ನಮ್ಮ ನ್ಯಾಯಯುತ ಪಾಲನ್ನು ನಮಗೆ ನೀಡಿದರೆ ಕೈ ಮುಗಿದು ನಮಿಸುತ್ತೇವೆ. ಒಂದುವೇಳೆ ನಮ್ಮ ಭಾಗಕ್ಕೆ ಅನ್ಯಾಯ ಮುಂದುವರಿದರೆ, ಜಗಳೂರನ್ನು ‘ಕಲ್ಯಾಣ ಕರ್ನಾಟಕ’ ಪ್ರಾಂತ್ಯಕ್ಕೆ ಸೇರಿಸಲು ಹೊಸ ಹೋರಾಟದ ದಾರಿ ತುಳಿಯುತ್ತೇವೆ ಎಂದೂ ಶಾಸಕರು ಮಾರ್ಮಿಕವಾಗಿ ನುಡಿದರು. ಸೋಮವಾರದೊಳಗೆ ಜಿಲ್ಲಾಧಿಕಾರಿ ಜಗಳೂರಿಗೆ ಬಂದು ಬರ ಪಟ್ಟಿಯ ಲೋಪದ ಕುರಿತು ಸ್ಪಷ್ಟನೆ ನೀಡಬೇಕು ಎಂದು ಎಚ್ಚರಿಸಿದರು.
ರೈತರಿಗೆ ಅಭಯ:
ಜಗಳೂರು ತಾಲೂಕು ಬರ ಪಟ್ಟಿಗೆ ಸೇರ್ಪಡೆ ಆಗುವುದು ಸೂರ್ಯನಷ್ಟೇ ಸತ್ಯ. ಈಗಾಗಲೇ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅಗತ್ಯ ಬಿದ್ದರೆ ರೈತರ ನಿಯೋಗವನ್ನು ಮುಖ್ಯಮಂತ್ರಿ ಬಳಿಗೆ ಕರೆದೊಯ್ದು ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ರಾಜ್ಯ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್‌ಕುಮಾರ್, ಷಂಷೀರ್ ಅಹಮದ್, ಮಹೇಶ್ವರಪ್ಪ, ಜಿ.ಎಚ್.ಶಂಭುಲಿಂಗಪ್ಪ, ತಿಪ್ಪೇಸ್ವಾಮಿ, ಹಲವು ಮುಖಂಡರು, ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
- - -
-29ಜೆ.ಜಿ.ಎಲ್.2ಅ: ಜಗಳೂರು ಶಾಸಕ ಬಿ.ದೇವೇಂದ್ರಪ್ಪ ತಾಪಂ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.