ಶಿವಮೊಗ್ಗ: ಕೃಷಿ ಸಾಲದ(ಎಂಟಿಎಲ್) ಬಡ್ಡಿ ಹಣವನ್ನು ಮನ್ನಾ ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದ್ದರಿಂದ ಜಿಲ್ಲೆಯ 144 ರೈತ ಫಲಾನುಭವಿಗಳು ಸಾಲದ ಅಸಲು ಹಣ ಪಾವತಿಸಿದ್ದು, ಕೂಡಲೇ ರಾಜ್ಯ ಸರ್ಕಾರ 2.52 ಕೋಟಿ ರು. ಬಡ್ಡಿ ಹಣವನ್ನು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ ಮಾಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 144 ರೈತ ಫಲಾನುಭವಿಗಳು ಸಾಲದ ಅಸಲು ಹಣ ಪಾವತಿಸಿದ್ದು, ಬಡ್ಡಿ ಯೋಜನೆಯ 2.52 ಕೋಟಿ ರು. ಬಿಡುಗಡೆಯಾಗದೇ ರೈತರು ಜಿಲ್ಲೆಯ ಡಿಸಿಸಿ ಬ್ಯಾಂಕ್ ಗೆ ಅಡಮಾನ ಮಾಡಿದ ದಾಖಲೆಗಳನ್ನು ವಾಪಸ್ ಪಡೆಯದೇ ಬೇರೆ ವಾಣಿಜ್ಯ ಬ್ಯಾಂಕ್ ನಲ್ಲಿ ಸಾಲ ಪಡೆಯದ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.2018ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಾಲ ಮನ್ನಾ ಯೋಜನೆಯನ್ನು ಘೋಷಣೆ ಮಾಡಿದಾಗ ಜಿಲ್ಲೆಯಲ್ಲಿ 1956 ಫಲಾನುಭವಿಗಳಿಗೆ 12.54 ಕೋಟಿ ರು. ಬಿಡುಗಡೆಯಾಗದೇ ರೈತರಿಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದಂತೆ ಬಡ್ಡಿ ಮನ್ನಾ ಯೋಜನೆಯ 2.52 ಕೋಟಿ ರು. ಹಾಗೂ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿನ 12.54 ಕೋಟಿ ರು.ಗಳನ್ನು ಕೂಡಲೇ ಬಿಡುಗಡೆ ಮಾಡಿ ರೈತರು ಡಿಸಿಸಿ ಬ್ಯಾಂಕ್ ಗಳಲ್ಲಿ ಅಡಮಾನ ಮಾಡಿರುವ ತಮ್ಮ ಭೂದಾಖಲೆಗಳನ್ನು ವಾಪಸ್ ಪಡೆದು ಮುಂದಿನ ಕೃಷಿ ಚಟುವಟಿಕೆಗೆ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಮೊಯಿದ್ದೀನ್ ರಿಪ್ಪನ್‌ಪೇಟೆ, ಶಂಕ್ರಾನಾಯ್ಕ್, ಜನಮೇಜಿ ರಾವ್, ರಾಜಪ್ಪ ಕೋಳಿವಂಕ, ವೇದಾಂತಗೌಡ, ಟಿ.ಬಿ. ಸೋಮಶೇಖರಯ್ಯ ಉಪಸ್ಥಿತರಿದ್ದರು.